ಪುತ್ತೂರು: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತೀಯೊಳಗಿನ ಜಿದ್ದಾಜಿದ್ದಿನ ಹೋರಾಟದ ನಡುವೆ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ನಿರ್ದೇಶಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಳ್ಯೊಟ್ಟು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ್ ಗೌಡ ಗುಮ್ಮಟೆಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಗಳಿಗೆ ಯಾವುದೇ ಗೊಂದಲಗಳಿಲ್ಲದೆ ಇತ್ತೀಚೆಗೆ ಅವಿರೋಧ ಆಯ್ಕೆ ನಡೆದಿತ್ತು. ೧೨ ನಿರ್ದೆಶಕರ ಸ್ಥಾನಗಳಲ್ಲಿ 11 ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಮತ್ತು 1 ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ಕಗ್ಗಂಟಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಹಾಲಿ ನಿರ್ದೇಶಕ, ಒಂದು ಬಾರಿ ಅಧ್ಯಕ್ಷರಾಗಿ ಆಗಿ ಸೇವೆ ಸಲ್ಲಿಸಿದ್ದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ೨ ಬಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಗ್ರಾಪಂ ಮಾಜಿ ಸದಸ್ಯ, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಕೊಮ್ಮಂಡ ಜಗನ್ನಾಥ ರೈರವರು ಪ್ರಬಲ ಆಕಾಂಕ್ಷಿಗಳಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಮುಖಂಡರು ಆಗಮಿಸಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಇಬ್ಬರೂ ಆಕಾಂಕ್ಷಿಗಳು ಹಿಂದೆ ಸರಿಯದ ಕಾರಣ ಅಧ್ಯಕ್ಷರ ಆಯ್ಕೆ ಮಾಡುವುದು ಪುತ್ತೂರಿನ ಬಿಜೆಪಿಗೂ ಕಷ್ಟಕರವಾಗಿತ್ತು.
ಈ ನಡುವೆ ಆಯ್ಕೆ ಪ್ರಕ್ರಿಯೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗದ ಕಾರಣ ಕೊನೆಗೆ ಬಿಜೆಪಿ ಗ್ರಾಮಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌ರವರು ಇಬ್ಬರ ಹೆಸರನ್ನೂ ಕೈಬಿಟ್ಟು ಮೂರನೇ ವ್ಯಕ್ತಿಯನ್ನಾಗಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ದಿವಾಕರ ಬಲ್ಲಾಳ್‌ರವರನ್ನು ಅಧಿಕೃತ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಇದಕ್ಕೆ ಸಹಮತ ಸೂಚಿಸದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಚುನಾವಣೆಗೆ ಸಿದ್ಧರಾಗಿ ನಾಮಪತ್ರ ಸಲ್ಲಿಕೆಗೆ ಸಿದ್ಧವಾದರು. ಇದರ ಬೆನ್ನಲ್ಲೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ದಿವಾಕರ ಬಲ್ಲಾಳ್‌ರವರು ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷರ ಆಯ್ಕೆಗಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ದಿವಾಕರ ಬಲ್ಲಾಳ್ ಹಾಗೂ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ಪರ್ಧಾ ಕಣದಲ್ಲಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೆಂದು ಘೋಷಣೆ ಆದ ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ೨ನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ನಾಗರಾಜ್ ಕಜೆ ಹಾಗೂ ಹರೀಶ್ ಗೌಡ ಗುಮ್ಮಟೆಗದ್ದೆ ನಾಮಪತ್ರ ಸಲ್ಲಿಸಿದ್ದರು. ಬಳಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಲ್ಲಿ ಮಾತುಕತೆ ನಡೆಸಿ ನಾಗರಾಜ್ ಕಜೆಯವರು ನಾಮಪತ್ರ ವಾಪಸ್ಸು ಪಡೆದ ಕಾರಣ ಹರೀಶ್ ಗೌಡ ಗುಮ್ಮಟೆಗದ್ದೆ ಅವಿರೋಧ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ೮ ನಿರ್ದೇಶಕರ ಮತ ಮತ್ತು ೧ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿಯ ಮತ ಸೇರಿ ಒಟ್ಟು ೯ ಮತ ಪಡೆದು ವಿಜಯಿಯಾದರು. ದಿವಾಕರ ಬಲ್ಲಾಳ್ ೪ ಮತ ಪಡೆದುಕೊಂಡರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಛೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ಹಾಗೂ ಸಿಬಂದಿಗಳು ಸಹಕರಿಸಿದರು.
ಈ ಸಂದರ್‍ಭದಲ್ಲಿ ಮಾಜಿ ಅಧ್ಯಕ್ಷ ರಂಗನಾಥ ರೈ ಮಾತನಾಡಿ ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘಕ್ಕೆ ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಪಡೆಯುವ ಮೂಲಕ ನಮ್ಮೆಲ್ಲರ ಹೆಮ್ಮೆಯ ಸಂಸ್ಥೆಯಾಗಿದೆ. ಸಾಲ ವಸೂಲಾತಿ, ಲಾಭ ಗಳಿಕೆ, ನೂತನ ಕಟ್ಟಡ ನಿರ್ಮಾಣ ಮುಂತಾದ ಕೆಲಸ ಕಾರ್ಯಗಳನ್ನು ನಡೆಸಿದೆ. ರೈತರಿಗೆ ತೊಂದರೆಯಾದಾಗ, ಸಹಕಾರ ಸಂಘ ಕೆಲಸ ಮಾಡುತ್ತಿದೆ. ಎಂದು ಹೇಳಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ನಿರ್ದೇಶಕ ಜಗನ್ನಾಥ ರೈ ಕೊಮ್ಮಂಡ ಮಾತನಾಡಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದಿನ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ರೈತರಿಗೆ ಅಗತ್ಯವಾದ ಸಾಲ ವಿತರಣೆ ಮಾಡಿ ಸಂಘದ ಅಭಿವೃದ್ಧಿ ಮಾಡಿ ಎಂದು ಹಾರೈಸಿದರು.
ನಿರ್ದೇಶಕ ದಿವಾಕರ ಬಲ್ಲಾಳ್ ಮಾತನಾಡಿ, ಅನಿವಾರ್ಯ ಕಾರಣಗಳಿಂದ ಇಂದು ಚುನಾವಣೆ ನಡೆದಿದೆ. ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅಭಿವೃದ್ಧಿಯ ದೃಷ್ಟಿಯಿಂದ ಶಶಿಕುಮಾರ್ ರೈ ಬಾಲ್ಯೊಟ್ಟು ಆಯ್ಕೆಯಾಗಿದ್ದು ಸಂತಸವಾಗಿದೆ. ಶಶಿಕುಮಾರ್ ರೈರವರು ಅನುಭವಿಯಾಗಿದ್ದು ಸಂಘವನ್ನು ಮುನ್ನಡೆಸಲು ಸಶಕ್ತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಜಗನ್ನಾಥ ರೈ ಕೊಮ್ಮಂಡರವರು ಕೂಡ ಅನುಭವ ಹೊಂದಿದವರಾಗಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿದ್ದು ನಾವೆಲ್ಲರೂ ಜತೆಯಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಈ ಸಂದರ್‍ಭದಲ್ಲಿ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಮಾಜಿ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೊರ್ಮಂಡ, ಮಾಜಿ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಅಮೃತಪ್ರಸಾದ್ ರೈ ಗುತ್ತು, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ರೈ ಬಾಜುವಳ್ಳಿ, ಬಿಜೆಪಿ ಗ್ರಾಮಾಂತರ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಿತ್ ಕಜೆ, ಸಂಘದ ಮಾಜಿ ನಿರ್ದೇಕರುಗಳಾದ ಅರವಿಂದ ಭಟ್ ಇರ್ದೆ, ಕರುಣಾಕರ ಶೆಟ್ಟಿ ಕೊಮ್ಮಂಡ, ನಿರ್ದೇಶಕರುಗಳಾದ ಶಂಭು ಭಟ್ ಡಿ., ನಾಗರಾಜ್ ಕಜೆ, ರಾಧಾಕೃಷ್ಣ ಭಟ್ ಕೆ., ನಿಖಿತಾ ಕೆ.ಯು., ನೀಲಾವತಿ ಪಿ., ಪರಮೇಶ್ವರ ನಾಯ್ಕ, ಮೊದುಕಂಞಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ಸ್ವಾಗತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಚಾರಕ ವಸಂತ್ ವಂದಿಸಿದರು.
ಅಧ್ಯಕ್ಷರಾಗಿ ಚುನಾಯಿತರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಂದು ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ನನ್ನ ಮೇಲೆ ಗೌರವವಿಟ್ಟು ಆಯ್ಕೆ ಮಾಡಿದ್ದಾರೆ. ಅವರ ಗೌರವಕ್ಕೆ ಚ್ಯುತಿ ಬಾರದ ಹಾಗೆ ಎಲ್ಲಾ ನಿರ್ದೇಶಕರನ್ನು, ಸಹಕಾರಿ ಸದಸ್ಯರನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಮಾಡುತ್ತೇನೆ ಎಂದರು.