ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ | ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿ

ಪುತ್ತೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪುತ್ತೂರು ನಗರಸಭೆಯ ನೆಕ್ಕಿಲ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಘಟಕ ಮತ್ತು ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಘಟಕಗಳ  ಅಧ್ಯಯನಕ್ಕೆ ಫೆ.20 ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತರಾದ  ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮತ್ತು ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಬಯೋ ಗ್ಯಾಸ್ ಘಟಕದ ಮೇಲ್ವಿಚಾರಕ ಲಿಕಿನ್ ಗೌಡ ಹಾಜರಿದ್ದರು.

ನಗರಸಭೆಯ ಪೌರಾಯುಕ್ತರಾದ ಮಧು ಎಸ್ ಮನೋಹರ್ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿಯನ್ನು ನೀಡಿದರು.

































 
 

ತಂಡದಲ್ಲಿ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ತರಬೇತಿ ಸಂಯೋಜಕಿ ಅಶ್ವಿನಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಆಗಮಿಸಿದ 25 ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಅಧ್ಯಯನಕ್ಕೆ ಆಗಮಿಸಿದ ಪ್ರಶಿಕ್ಷಣಾರ್ಥಿಗಳು ಘಟಕಗಳ ಪರಿಶೀಲನೆ ನಡೆಸಿದ ಬಳಿಕ ತಾವೇ ಸ್ವತಃ ನಗರಸಭೆಯ ಬಯೋ ಗ್ಯಾಸ್ ಚಾಲಿತ ವಾಹನಕ್ಕೆ  ಗ್ಯಾಸ್ ಹಾಕುವ ಮೂಲಕ ಅದಕ್ಕೆ ಸಾಕ್ಷಿಯಾದರು. ಆ ಬಳಿಕ ನಗರಸಭಾ ಕಚೇರಿ ಸಭಾಂಗಣಕ್ಕೆ ಆಗಮಿಸಿದ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಪುತ್ತೂರು ನಗರಸಭೆಯಲ್ಲಿ 2012 ರಿಂದ ಬಯೋ ಗ್ಯಾಸ್ ಘಟಕ ನಿರ್ಮಾಣವಾಗುವರೆಗೆ ನಗರಸಭಾ ವತಿಯಿಂದ ಕೈಗೊಂಡ ಎಲ್ಲಾ ಕಾರ್ಯಕ್ರಮಗಳ ಸವಿವರವನ್ನು ಪಿ ಪಿ ಟಿ ಮುಖಾಂತರ ಪೌರಾಯುಕ್ತರಾದ  ಮಧು ಎಸ್ ಮನೋಹರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮಾಜಿ ಅಧ್ಯಕ್ಷ ಜೀವಂದರ್ ಜೈನ್, ರೋಟರಿ ಸ್ವಚ್ಛ ಪುತ್ತೂರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ  ಕೃಷ್ಣ ನಾರಾಯಣ ಮುಳಿಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು. ನಗರಸಭೆಯ ಜೂನಿಯರ್ ಪ್ರೋಗ್ರಾಮರ್ ವಿನೋದ್ ಜೋಶಿ ಸಹಕರಿಸಿದರು.

ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಹನುಮಂತ ಕಲದಗಿ, ಶಿಡ್ಲಘಟ್ಟ ಪುರಸಭೆಯ ಪರಿಸರ ಅಭಿಯಂತರ ಮೋಹನ್ ಕುಮಾರ್ ಮಾತನಾಡಿ, ಸರಕಾರದ ಅನುದಾನವಿಲ್ಲದೆ ಕೇವಲ ಖಾಸಗಿ ಸಹಾಭಾಗಿತ್ವದಲ್ಲಿ ಇಂತಹ ಘಟಕ ಸ್ಥಾಪನೆ ಮಾಡಿ ಕಾರ್ಯರೂಪಕ್ಕೆ ತರುವುದು ಸುಲಭವಾದ ಮಾತಲ್ಲ ಇದಕ್ಕೆ ಸಾಕಷ್ಟು ಇಚ್ಛಾ ಶಕ್ತಿ ಬೇಕು. ಈ ಕಾರ್ಯಕ್ಕೆ ಕಾರಣೀಭೂತರಾದ ನಗರಸಭಾ  ಅಧ್ಯಕ್ಷರು, ಸರ್ವ ಸದಸ್ಯರುಗಳು, ಅಧಿಕಾರಿಗಳ ಶ್ರಮ ಹಾಗೂ ಅಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿ ಕಸದಿಂದ ರಸ ತೆಗೆಯುವಂತೆ ಮಾಡಿದ ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್ ನ ಶ್ರೀ ಕೃಷ್ಣ ನಾರಾಯಣ ಮುಳಿಯ ಇವರ ಇಚ್ಛಾ ಶಕ್ತಿಯು ಬಹಳ ಪ್ರಶಂಶನೀಯ ಎಂದರು.

ಮೈಸೂರಿನಿಂದ ಆಗಮಿಸಿದ ನಗರಾಭಿವೃದ್ಧಿ ಸಂಸ್ಥೆಯ ತರಬೇತಿ ಸಂಯೋಜಕಿ ಅಶ್ವಿನಿ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top