ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆ ಎಂದು ಕಿಡಿಕಾರಿದ ಬಿಜೆಪಿ ನಾಯಕರು
ಬೆಂಗಳೂರು: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿ ನಾಲ್ವರು ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿದ್ದು, ಈ ತನಿಖೆಯಲ್ಲಿ ಪಕ್ಷಪಾತ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಮುಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆ ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ. ಮುಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲೀನ್‌ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೊಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್’ ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಒಂದೇ ಒಂದು ದಿನ ನೆಪಮಾತ್ರಕ್ಕೆ ಆರೋಪಿ ಸಿದ್ದರಾಮಯ್ಯ ಹಾಗು ಅವರ ಪತ್ನಿಯನ್ನು ವಿಚಾರಣೆ ನಡೆಸಿ ಕ್ಲೀನ್‌ಚಿಟ್ ನೀಡಿರುವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ’. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ‘ನ್ಯಾಯ’ ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್‌ಚಿಟ್ ನೀಡಿ ‘ನ್ಯಾಯದ ಸಮಾಧಿ’ ಮಾಡಿದೆ ದುಷ್ಟ ಕಾಂಗ್ರೆಸ್ ಸರ್ಕಾರ. ಕೋರ್ಟಿಗೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿ ಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುರಾಯಸ್ವಾಮಿಯವರು ಮಾತನಾಡಿ, ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಳ್ಳುವ ಮುನ್ನವೇ ಸಿದ್ದರಾಮಯ್ಯ ಮತ್ತು ಅವರ ಪತ್ನಿಗೆ ಕ್ಲೀನ್‌ಚಿಟ್ ನೀಡಿರುವ ಕಾಂಗ್ರೆಸ್ ಸರ್ಕಾರ, ಈಗ ತನಿಖಾ ಸಂಸ್ಥೆಗಳ ಮೂಲಕ ಅಧಿಕೃತವಾಗಿ ಅದನ್ನು ದೃಢಪಡಿಸಲು ಪ್ರಯತ್ನಿಸುತ್ತಿದೆ. ಇದು ಸರ್ಕಾರದ ನಿರ್ಧಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನಿರ್ಧಾರದ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಕೇವಲ ಒಂದು ದಿನದ ವಿಚಾರಣೆಯ ನಂತರ ಕೋರ್ಟ್ ಆದೇಶದ ನಿರೀಕ್ಷೆ ಇಲ್ಲದೆ ನೀಡಲಾದ ನಿರ್ಧಾರ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಮುಖ್ಯ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವ ಬದಲು ‘ಬಿ ರಿಪೋರ್ಟ್’ ಸಲ್ಲಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಹಸ್ತಕ್ಷೇಪದಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಲೋಪಗೊಂಡಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಸತ್ಯವನ್ನು ಯಾವತ್ತೂ ಸಂಪೂರ್ಣವಾಗಿ ಮರೆಮಾಚಲು ಸಾಧ್ಯವಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆಗೆ ಹಸ್ತಕ್ಷೇಪ ಮಾಡುವ ಪ್ರಯತ್ನವೆಂದೇ ನಾಡಿನ ಜನತೆ ಭಾವಿಸುತ್ತಿದ್ದಾರೆ. ಈ ಪ್ರಕರಣವನ್ನು ಸಮಗ್ರ ತನಿಖೆ ಮಾಡುವ ಮೂಲಕ ಸತ್ಯ ಅನಾವರಣಗೊಳ್ಳಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ. ನ್ಯಾಯ ಪ್ರಕ್ರಿಯೆ ವಿಳಂಬವಾಗಬಹುದು, ಆದರೆ ನಿರಾಕರಿಸಲಾಗದು. ಪ್ರಾಮಾಣಿಕ ತನಿಖೆಯ ಮೂಲಕ ಸತ್ಯ ಬಯಲಿಗೆ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.