ಮೊದಲ ಸಲ ಶಾಸಕಿಯಾದ ಮಹಿಳೆಗೆ ಒಲಿದ ಅದೃಷ್ಟ
ಹೊಸದಿಲ್ಲಿ: ದಿಲ್ಲಿಯ ಮುಖಯಮಂತ್ರಿಯ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಸಣ್ಣದೊಂದು ಅಚ್ಚರಿಯನ್ನು ನೀಡಿದೆ. ರೇಖಾ ಗುಪ್ತ ನೂತನ ಮುಖ್ಯಮಂತ್ರಿಯಾಗಿ ನಿನ್ನೆ ಆಯ್ಕೆಯಾಗಿದ್ದು, ಇಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಸಂಸದೀಯ ಸದಸ್ಯರು ಬನಿಯಾ ಸಮುದಾಯದವರನ್ನು ಸಿಎಂ ಆಗಿ ಆಯ್ಕೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅದರಂತೆ ಬನಿಯಾ ಸಮುದಾಯದ ರೇಖಾ ಗುಪ್ತ ದಿಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಮೊದಲು ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆದ್ದ ಪರ್ವೇಶ್ ವರ್ಮ ಅವರನ್ನು ಆಯ್ಕೆ ಮಾಡಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ರೇಖಾ ಗುಪ್ತ ಸಿಎಂ ಆಗಿ ಆಯ್ಕೆಯಾಗಿದ್ದು, ಪರ್ವೇಶ್ ವರ್ಮ ಉಪಮುಖ್ಯಮಂತ್ರಿಯಾಗಲಿದ್ದಾರೆ.
ದಿಲ್ಲಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತ ಅವರ ಹೆಸರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ರೇಖಾ ಗುಪ್ತ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಂದನಾ ಕುಮಾರಿ ಅವರನ್ನು 29,595 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.
ರೇಖಾ ಗುಪ್ತ ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಸದಸ್ಯೆ. ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ವಿದ್ಯಾರ್ಥಿ ರಾಜಕೀಯವನ್ನು ಪ್ರವೇಶ ಮಾಡಿದ ರೇಖಾ ಗುಪ್ತ 2003-2004ರವರೆಗೆ ಬಿಜೆಪಿ ಯುವ ಮೋರ್ಚಾ ದೆಹಲಿಯಲ್ಲಿ ಕಾರ್ಯದರ್ಶಿಯಾಗಿದ್ದರು. 2004-2006ರಲ್ಲಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅವರು 2007ರ ಏಪ್ರಿಲ್‌ನಲ್ಲಿ ಬಿಜೆಪಿ ಟಿಕೆಟ್ ಪಡೆದು ಉತ್ತರ ಪಿತಂಪುರಾ ವಾರ್ಡ್‌ನಿಂದ ಕೌನ್ಸಿಲರ್ ಆಗಿದ್ದರು. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿದ್ದರು.
ದಿಲ್ಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಲಿರುವ ರೇಖಾ ಗುಪ್ತ ಬಿಜೆಪಿಯಿಂದ ಎರಡನೇ ಮಹಿಳಾ ಸಿಎಂ ಆಗುತ್ತಿದ್ದಾರೆ. ಸುಷ್ಮಾ ಸ್ವರಾಜ್ ಬಳಿಕ ಸಿಎಂ ಸ್ಥಾನಕ್ಕೆ ಏರುತ್ತಿರುವ ರೇಖಾ ಗುಪ್ತ ವಿದ್ಯಾರ್ಥಿ ನಾಯಕತ್ವದಲ್ಲಿ ಬೇರೂರಿರುವ ದೀರ್ಘ ರಾಜಕೀಯ ಜೀವನವನ್ನು ಹೊಂದಿರುವ ಅನುಭವಿ ನಾಯಕಿ. ಪ್ರಸ್ತುತ ದಿಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ 50 ವರ್ಷ ವಯಸ್ಸಿನ ರೇಖಾ ಗುಪ್ತ ಈ ಹಿಂದೆ ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. 2025ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ (ವಾಯುವ್ಯ) ಸ್ಥಾನವನ್ನು 68,200 ಮತಗಳಿಂದ ಗೆದ್ದರು.
ವೃತ್ತಿಯಲ್ಲಿ ವಕೀಲರಾಗಿರುವ ರೇಖಾ ಗುಪ್ತ 1996ರಿಂದ 1997ರವರೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು ಪುರಸಭೆಯ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. 2007ರಲ್ಲಿ ವಾರ್ಡ್ 54ರಿಂದ ಕೌನ್ಸಿಲರ್ ಚುನಾವಣೆಯಲ್ಲಿ ಗೆದ್ದರು. ರೇಖಾ ಗುಪ್ತ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನೂತನ ಸಿಎಂ, ಸಚಿವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಸಿಎಂಗಳು ಹಾಗೂ ಡಿಸಿಎಂಗಳು ಭಾಗಿಯಾಗಲಿದ್ದಾರೆ.