ಹೊಸದಿಲ್ಲಿ: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಚುನಾವಣಾ ಆಯೋಗದ (ಇಸಿ) ಸದಸ್ಯರ ನೇಮಕಾತಿ ಕುರಿತ ಹೊಸ ಕಾನೂನಿನಡಿಯಲ್ಲಿ ನೇಮಕಗೊಂಡ ಮೊದಲ ಸಿಇಸಿ ಜ್ಞಾನೇಶ್ ಕುಮಾರ್ ಆಗಿದ್ದಾರೆ.
ಜ್ಞಾನೇಶ್ ಕುಮಾರ್ ಅಧಿಕಾರಾವಧಿ ಜನವರಿ 26, 2029ರವರೆಗೆ ಇರಲಿದೆ. ಮುಂದಿನ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುವ ಕೆಲವು ದಿನಗಳ ಮೊದಲು ಜ್ಞಾನೇಶ್ ಕುಮಾರ್ ನಿವೃತ್ತರಾಗಲಿದ್ದಾರೆ.
1989ರ ಬ್ಯಾಚ್ ಹರಿಯಾಣ-ಕೇಡರ್ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.
26ನೇ ಸಿಇಸಿಯಾಗಿ ನೇಮಕಗೊಂಡಿರುವ ಜ್ಞಾನೇಶ್ ಕುಮಾರ್ ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಮತ್ತು 2026ರಲ್ಲಿ ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳನ್ನು ನಡೆಸಿಕೊಡಲಿಲಿದ್ದಾರೆ. ಅಂತೆಯೇ 2026ರಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ.
ಕೇಂದ್ರ ಗೃಹ ಸಚಿವಾಲಯದಲ್ಲಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಮಾರ್, ಮಾರ್ಚ್ 15, 2024ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.