ಪುತ್ತೂರು ಸರ್ವ ಜನಾಂಗದ ತೋಟ | ಅಮೃತ ನಗರೋತ್ಥಾನ ಕಾಮಗಾರಿ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜನರು ಸ್ವಾಭಿಮಾನದ ಬದುಕು ಸಾಗಿಸಲು ಬೇಕಾದ ಅಗತ್ಯತೆಗಳನ್ನು ಪೂರೈಸುವ ದೃಷ್ಟಿಕೋನದಿಂದ ಪುತ್ತೂರು ನಗರಸಭೆ ಆಲೋಚಿಸುತ್ತಿದೆ. ಇದು ಸಾಧ್ಯವಾದಾಗ ಸಾರ್ಥಕತೆಯನ್ನು ನಾವು ಕಾಣುತ್ತೇವೆ. ಆದ್ದರಿಂದ ಕುವೆಂಪು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟ ಪುತ್ತೂರು ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ನಗರಸಭೆ ಆಶ್ರಯದಲ್ಲಿ ರವಿವಾರ ಪುತ್ತೂರು ಪುರಭವನದಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4ರ ಯೋಜನೆಯಲ್ಲಿ ಪುತ್ತೂರು ನಗರಸಭೆಗೆ ಮಂಜೂರಾಗಿರುವ 30 ಕೋಟಿ ರೂ. ಮೊತ್ತದ ಯೋಜನೆಯಲ್ಲಿ 16.96 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೀರ್ಘಕಾಲೀನ ಯೋಜನೆಗಳು:
ಪ್ರಜೆಗಳು ಪ್ರಭುಗಳಾದಾಗ, ಪ್ರಭು ಸೇವಕನಾದಾಗ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಜನರು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಡುತ್ತಾರೆ. ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿವೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅಮೃತ ನಗರೋತ್ಥಾನದಂತಹ ಹಲವು ಯೋಜನೆಗಳನ್ನು ಜನರ ಮುಂದಿಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾತಂತ್ರ್ಯದ 75ರ ಸಂಭ್ರಮವನ್ನು ಅನುಭವಿಸುವಂತಾಗಬೇಕು ಎನ್ನುವುದೇ ಪ್ರಮುಖ ಧ್ಯೇಯ. ಆದ್ದರಿಂದ ಈ ನಗರದ ಅಭಿವೃದ್ಧಿಗೆ ಏನು ಬೇಕು ಎನ್ನುವುದನ್ನು ಅಧಿಕಾರಿಗಳು ತೀರ್ಮಾನ ಮಾಡುವುದಲ್ಲ. ಬದಲಿಗೆ, ಜನರು ಹಾಗೂ ಜನಪ್ರತಿನಿಧಿಗಳು ಆಲೋಚಿಸಬೇಕು ಎಂದು ಹೇಳಿದರು.

































ಸಂಪದ್ಭರಿತ ರಾಜ್ಯ ಕರ್ನಾಟಕ:
25-30 ವರ್ಷಗಳ ಹಿಂದೆ ಇಲ್ಲಿ ಆಡಳಿತ ನಡೆಸಿದ ರಾಮಚಂದ್ರ ಶೆಣೈ, ರಾಮ ಭಟ್ ಅವರ ಆದರ್ಶಗಳು ಹಾಗೂ ಸಮಾಜಮುಖಿ ಚಿಂತನೆಗಳು ಇಂದು ನಮಗೆ ಪ್ರೇರಣೆಯಾಗಿವೆ. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ದೇಶದ ಅತೀ ಹೆಚ್ಚು ಸಂಪದ್ಭರಿತ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರಾಕೃತಿಕವಾಗಿ ಹಾಗೂ ಅತಿ ಹೆಚ್ಚು ಜಿಎಸ್‌ಟಿ ಕೊಡುವ ೨ನೇ ಸ್ಥಾನದಲ್ಲಿರುವ ರಾಜ್ಯ ಕರ್ನಾಟಕ. ಐಟಿ-ಬಿಟಿಯಲ್ಲಿ ನಂ.1, ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ಎರಡನೇ ರಾಜ್ಯ ಕರ್ನಾಟಕ. ಹೀಗೆ ಬೇರೆ ಬೇರೆ ವಿಭಾಗದಲ್ಲಿ ರಾಜ್ಯ ಸಾಧನೆ ಮಾಡಿದೆ. ಇನ್ನಷ್ಟು ಸಾಧನೆ ಮುಂದಿದೆ. ನಮ್ಮಲ್ಲಿರುವ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು, ಸಮಾಜಕ್ಕೆ ಹೇಗೆ ಧಾರೆ ಎರೆಯಬಹುದು ಎನ್ನುವುದನ್ನು ನಾವು ಆಲೋಚಿಸಬೇಕಿದೆ ಎಂದರು.

 
 

ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಉದ್ಘಾಟಿಸಿ, ಶುಭಹಾರೈಸಿದರು. ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಜಿಲ್ಲಾಧಿಕಾರಿ ರವಿಕುಮಾರ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ., ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪುರಂದರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top