ಮೈಸೂರು: ನಗರದ ಅಪಾರ್ಟ್‍ಮೆಂಟ್ ಒಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿ ವ್ಯಕ್ತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ವಿಶ್ವೇಶ್ವರಯ್ಯ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಚೇತನ್ (45), ರೂಪಾಲಿ (43), ಪ್ರಿಯಂವದಾ ಮತ್ತು ಕುಶಾಲ್ (15) ಎಂದು ಗುರುತಿಸಲಾಗಿದೆ. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿವೆ. ಚೇತನ್ ವಿಷ ನೀಡಿ ಮನೆಯವರನ್ನು ಸಾಯಿಸಿ, ಬಳಿಕ ತಾನು ನೇಣು ಬಿಗಿದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಜಾನ್ಹವಿ, ವಿದ್ಯಾರಣ್ಯಪುರಂ ಇನ್‌ಸ್ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.