ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಒಟ್ಟು ನಡೆಯಬೇಕಾದ ಅಭಿವೃದ್ಧಿಯ ಹಿನ್ನಲೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ್ ಆಡಳಿತ ಕಚೇರಿಯಲ್ಲಿ ನಡೆಯಿತು.
ಜ್ಯೋತಿಷಿ ಪ್ರಸನ್ನ ಆಚಾರ್ಯ ನಿಟ್ಟೆ ಅವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು.
ಬೆಳಗ್ಗೆ ಸುಮಾರು 10.30 ಕ್ಕೆ ಜ್ಯೋತಿಷಿ ಪ್ರಸನ್ನ ಆಚಾರ್ಯ ಅವರನ್ನು ಬ್ಯಾಂಡ್ ವಾದ್ಯಗಳೊಂದಿಗೆ ದೇವಸ್ಥಾನದ ಒಳಾಂಗಣಕ್ಕೆ ಸ್ವಾಗತಿಸಲಾಯಿತು. ಬಳಿಕ ಶ್ರೀ ದೇವಸ್ಥಾನದ ಗರ್ಭಗುಡಿ ಒಳಗೆ ಪ್ರವೇಶಿಸಿ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರು ಗರ್ಭಗುಡಿ ಎದುರು ಪ್ರಶ್ನಾಚಿಂತನೆ ಸಾಂಗವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಪ್ರಸಾದ ನೀಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‍ಪಂಜಿಗುಡ್ಡೆ ದೀಪ ಬೆಳಗಿಸಿದ ಬಳಿಕ ಮೊದಲಿಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಆರೂಢ ರಾಶಿ ಮಕರ ರಾಶಿ ಬಂದಿದ್ದು, ದೇವಸ್ಥಾನದ ಪರಿಸರ ಮನುಷ್ಯ ವಾಸಕ್ಕೆ ಯೋಗವಾದ ಪ್ರದೇಶವಲ್ಲ. ಆ ಸ್ಥಳ ದೇವಸ್ಥಾನದ ಉತ್ಸವಗಳಿಗೆ ಬಳಕೆಯಾಗಬೇಕಾಗಿದೆ. ದೇವರ ಜಾಗ ದೇವರಿಗೆ ಬಿಡಬೇಕೆಂಬುದು ಮೊದಲಿನಿಂದಲೇ ಇದೆ. ಜಾಗವನ್ನು ದೇವರಿಗೆ ಉಚಿತವಾಗಿ ಬಿಟ್ಟುಕೊಡಬೇಕಾಗಿತ್ತು. ಇಲ್ಲಿ ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನೇ ಮಾಡಲಾಗುತ್ತಿದೆ. ಜಾಗ ತೆರವುಗೊಳಿಸಲು ಹಣ ಪಡೆದರೆ ದೇವರ ಋಣ ಉಳಿದಂತೆ ಆಗುತ್ತದೆ. ದೇವರ ಸಪ್ತ ಪ್ರಕಾರವನ್ನು ಸಂರಕ್ಷಿಸುವ ಅಗತ್ಯವಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ದೇವಸ್ಥಾನಕ್ಕೇ ಹಿಂದಿರುಗಿಸುವುದು ಉತ್ತಮ.
ಈಗ ದೇವಾಲಯದ ಹೊರಭಾಗದ ಆಗ್ನೇಯದಲ್ಲಿರುವ ರಕ್ತೇಶ್ವರಿ ದೇವಿ ಕೋಪದಲ್ಲಿಯೇ ಇದ್ದಾರೆ. ಅವರ ಅನುಸ್ಮರಣೆ ನಡೆಯುವುದು, ಶಾಂತಗೊಳಿಸುವ ಕ್ರಿಯೆ ಆಗಬೇಕು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು. ಕ್ಷೇತ್ರಕ್ಕೆ ಮೂಲ ರಕ್ತೇಶ್ವರಿ. ಆದರೆ ರಕ್ತೇಶ್ವರಿಯ ಸಾನಿಧ್ಯಕ್ಕೆ ಪೂರಕ ಗೌರವ ಲಭಿಸುತ್ತಿಲ್ಲ ಎನ್ನುವ ಅಂಶ ಕಂಡುಬಂತು. ಬಾಧೆಗೆ ಅಗತ್ಯ ಕ್ರಮ ಹಾಗೂ ಮೃತ್ಯುಂಜಯ ಶಾಂತಿ ಕೈಗೊಳ್ಳಬೇಕು ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂತು.
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ದೈವ ಸೂಚನೆಯಂತೆ ನಡೆಯುತ್ತಿದೆ. ಆದರೆ ಮೂಲ ದುರ್ಗೆಗೆ ಸರಿಯಾದ ಸ್ಥಾನ ನೀಡಬೇಕು. ವೈಷ್ಣವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋಪ ಇಲ್ಲಿ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು ಜಳಕಕ್ಕೆ ತೆರಳುವ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಸಬೇಕು. ಅಲ್ಲದೆ ಕೃಷ್ಣ ಕ್ಷೇತ್ರಕ್ಕೆ ಸಹಕಾರ ನೀಡಬೇಕು ಎಂಬುದು ಕಂಡು ಬಂದಿದೆ. ಸಂಜೆ ತನಕ ಪ್ರಶ್ನಾ ಚಿಂತನೆ ನಡೆಯಿತು.
ಪ್ರಶ್ನಾ ಚಿಂತನೆಯಲ್ಲಿ ಪ್ರಧಾನ ಅರ್ಚಕ ವಸಂತ ಕೆದಿಲಾಯ, ಶ್ರೀನಿವಾಸ ಭಟ್, ಗೋಪಾಲಕೃಷ್ಣ ಭಟ್ ಪಡೀಲು, ಪ್ರಶಾಂತ್ ಭಟ್ ಸಹಕರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಕುಲಾಲ್‍ಪಿ.ವಿ., ನಳಿನಿ ಶೆಟ್ಟಿ, ಕೃಷ್ಣವೇಣಿ, ಮಹಾಬಲ ರೈ ಒಳತ್ತಡ್ಕ, ಈಶ್ವರ ಬೆಡೇಕರ್, ವಿನಯ ಕುಮಾರ್ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಭಕ್ತಾದಿಗಳು ಉಪಸ್ಥಿತರಿದ್ದರು.