ಹೊಸದಿಲ್ಲಿ : ಇಷ್ಟಪಟ್ಟವರಿಗೆ ಉಡುಗೊರೆ ಕೊಡುವುದರಲ್ಲೇನೂ ವಿಶೇಷವಿಲ್ಲ. ಅದರಲ್ಲೂ ಪ್ರೇಮಿಗಳ ಪಾಲಿಗೆ ವ್ಯಾಲೆಂಟೈನ್ ಡೇಯಂದು ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ಮಾಮೂಲು. ಆದರೆ ಉಡುಗೊರೆಯನ್ನು ಸೇಡು ತೀರಿಸಿಕೊಳ್ಳಲು ಕೂಡ ಬಳಸಿಕೊಳ್ಳಬಹುದು ಎಂಬುದನ್ನು ಗುರುಗ್ರಾಮದ ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಈಕೆ ಕೊಟ್ಟ ಉಡುಗೊರೆಯಿಂದ ಕೈಕೊಟ್ಟ ಪ್ರೇಮಿ ಸುಸ್ತಾಗಿ ಹೋಗಿದ್ದಾನೆ. 24 ವರ್ಷದ ಆಯುಷಿ ರಾವತ್ ಎಂಬ ಯುವತಿ ಪ್ರೇಮಿಗಳ ದಿನದಂದು ತನ್ನ ಮಾಜಿ ಗೆಳೆಯನ ಮನೆಗೆ ಬರೋಬ್ಬರಿ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ.
ಹಣ ಪಾವತಿ ಮಾಡಿಲ್ಲ. ಡೆಲಿವರಿ ವೇಳೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿದ್ದಾಳೆ. ಮನೆಗೆ ಬಂದ ಪಿಜ್ಜಾ ರಾಶಿಯನ್ನು ನೋಡಿ ಆಕೆಯ ಮಾಜಿ ಗೆಳೆಯ ಹೈರಾಣಾಗಿದ್ದಾನೆ. ಇದರ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಯಶ್ ಹಾಗೂ ಆಯುಷಿ ರಾವತ್ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪ ಮೂಡಿತ್ತು. ಎಲ್ಲವನ್ನೂ ಮರೆತು ಪ್ರೀತಿ ಮುಂದುವರಿಸಲು ಆಯುಷಿ ಬಯಸಿದ್ದಳು. ಆದರೆ ಪ್ರಿಯತಮ ಯಶ್ ಸಂಬಂಧ ಮುಂದುವರಿಸಲು ಸಿದ್ಧವಿಲ್ಲದೆ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದನು. ಆಯುಷಿಗೆ ಆ ನೋವಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ.
ಹೀಗಿರುವಾಗ ಪ್ರೇಮಿಗಳ ದಿನದಂದು ತನಗೆ ಮೋಸ ಮಾಡಿದವನ ವಿರುದ್ಧ ವಿಭಿನ್ನವಾಗಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಆನ್‌ಲೈನ್ ಮೂಲಕ 100 ಪಿಜ್ಜಾಗಳನ್ನು ಮಾಜಿ ಗೆಳೆಯನ ಮನೆ ವಿಳಾಸಕ್ಕೆ ಆರ್ಡರ್ ಮಾಡಿದ್ದಾಳೆ. ಆದರೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡದೆ ಡೆಲಿವರಿ ವೇಳೆ ಹಣ ಪಾವತಿ ಮಾಡುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದಾಳೆ.
ವೀಡಿಯೊದಲ್ಲಿ ಫುಡ್ ಡೆಲಿವರಿ ಏಜೆಂಟ್ 100 ಪಿಜ್ಜಾಗಳನ್ನು ಮನೆಗೆ ತಲುಪಿಸುತ್ತಿರುವುದನ್ನು ಕಾಣಬಹುದು. ಆದರೆ ಯಶ್ ಡೆಲಿವರಿ ಏಜೆಂಟ್‌ನೊಂದಿಗೆ ವಾಗ್ವಾದಕ್ಕೆ ಇಳಿದರೂ ಪ್ರಿಯತಮೆಯ ಸೇಡಿಗೆ ಹದಿನೈದು ಸಾವಿರ ರೂಪಾಯಿ ಪಾವತಿಸಬೇಕಾಗಿ ಬಂದಿದೆ.