ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಘೋಷಣೆ
ವಾಷಿಂಗ್ಟನ್ : ಮುಂಬಯಿ ಮೇಲೆ 2008ರ ನ.26ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರ ತಹಾವುರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಡೊನಾಲ್ಡ್ ಟ್ರಂಪ್ ಅಪರಾಧಿ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು, ಅಮೆರಿಕದ ಸುಪ್ರೀಂ ಕೋರ್ಟ್ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಪ್ರಕರಣದಲ್ಲಿ ಅವನ ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪಾಕಿಸ್ಥಾನ ಮೂಲದ ಕೆನಡಾದ ಉದ್ಯಮಿ ತಹಾವ್ವುರ್ ರಾಣಾ ಹೆಸರನ್ನು 26/11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದ್ದರು. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸಕ್ರಿಯ ಸದಸ್ಯನಾಗಿ ಕೆಲಸ ಮಾಡುತ್ತಿರುವ ಆರೋಪ ಆತನ ಮೇಲಿದೆ. 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಹಾಯ ಮಾಡಿದ ಆರೋಪ ರಾಣಾ ಮೇಲೆ ಹೊರಿಸಲಾಗಿತ್ತು.
ಮುಂಬಯಿಯಲ್ಲಿ ದಾಳಿ ನಡೆಸಬೇಕಾದ ಸ್ಥಳಗಳ ಪರಿಶೀಲನೆ ನಡೆಸಿದ್ದುರಾಣಾ, ಅದರ ನೀಲನಕ್ಷೆಯನ್ನು ಸಿದ್ಧಪಡಿಸಿ ಪಾಕಿಸ್ಥಾನಿ ಭಯೋತ್ಪಾದಕರಿಗೆ ಹಸ್ತಾಂತರಿಸಿದ್ದ. ರಾಣಾ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಸಯೀದ್ ಗಿಲಾನಿಯ ಬಾಲ್ಯದ ಸ್ನೇಹಿತ. ಹೆಡ್ಲಿ ಒಬ್ಬ ಅಮೆರಿಕನ್ ಪ್ರಜೆ. ಅಕ್ಟೋಬರ್ 2009 ರಲ್ಲಿ ಅಮೆರಿಕದ ಅಧಿಕಾರಿಗಳು ಅವನನ್ನು ಚಿಕಾಗೋದಲ್ಲಿ ಬಂಧಿಸಿದ್ದರು. ಮುಂಬೈ ದಾಳಿಯಲ್ಲಿ ಹೆಡ್ಲಿ ಭಾಗಿಯಾಗಿರುವುದು ಸಾಬೀತಾದ ಬಳಿಕ ಅಮೆರಿಕದ ನ್ಯಾಯಾಲಯ ಅವನಿಗೆ 35 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ರಾಣಾ ಪಾಕಿಸ್ಥಾನದ ಹಸನ್ ಅಬ್ದಲ್ ಕೆಡೆಟ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದ, ಹೆಡ್ಲಿ ಅಮೆರಿಕಕ್ಕೆ ತೆರಳುವ ಮೊದಲು ಐದು ವರ್ಷಗಳ ಕಾಲ ಅಲ್ಲಿಯೇ ಅಧ್ಯಯನ ಮಾಡಿದ್ದ. ಪಾಕಿಸ್ಥಾನಿ ಸೈನ್ಯದಲ್ಲಿ ವೈದ್ಯನಾಗಿ ಕೆಲಸ ಮಾಡಿದ ನಂತರ, ರಾಣಾ ಕೆನಡಾಕ್ಕೆ ಸ್ಥಳಾಂತರಗೊಂಡ ಮತ್ತು ಕೆಲವು ವರ್ಷಗಳ ನಂತರ ಕೆನಡಾದ ಪೌರತ್ವವನ್ನೂ ಪಡೆದ. ಚಿಕಾಗೋದಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಎಂಬ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಿದ್ದ. ರಾಣಾನ ಕಂಪನಿ ಮುಂಬಯಿಯಲ್ಲಿ ಒಂದು ಶಾಖೆಯನ್ನು ಸಹ ಹೊಂದಿತ್ತು.