ಸಾವಿರಾರು ಕೋ.ರೂ. ತೆರಿಗೆ ವಂಚನೆ, ಅಕ್ರಮ ಗಳಿಕೆ ಪತ್ತೆ
ಮಂಗಳೂರು: ಅಡಿಕೆ ರಫ್ತು ವ್ಯವಹಾರ ನಡೆಸುತ್ತಿರುವ ಮಂಗಳೂರಿನ ಕೆಲವು ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಮಂಗಳೂರಿನ ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ & ಕೋ, ಶಿವ ಪ್ರೇಮ್ ಟ್ರೇಡರ್ಸ್ ಮತ್ತು ಪರಮೇಶ್ವರಿ ಟ್ರೇಡಿಂಗ್ ಕಂಪನಿ ಮೇಲೆ ಐಟಿ ದಾಳಿಯಾಗಿದೆ. ಟ್ರೇಡಿಂಗ್ ಕಂಪನಿ ಕಚೇರಿ, ಗೋಡೌನ್ ಹಾಗೂ ಟ್ರೇಡಿಂಗ್ ಕಂಪನಿ ಮಾಲೀಕರ ಮನೆ ಮೇಲೂ ದಾಳಿ ನಡೆಸಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಅಡಿಕೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸ್ವಸ್ತಿಕ್ ಟ್ರೇಡಿಂಗ್ ಮತ್ತು ಇತರ ಸಂಸ್ಥೆಗಳು ಉತ್ತರ ಪ್ರದೇಶ, ಬಿಹಾರ, ದಿಲ್ಲಿ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿವೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿ ಆದಾಯ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಅನೇಕ ಅಕ್ರಮ ವಹಿವಾಟುಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ದಾಖಲೆ ಇಲ್ಲದ ಆಭರಣ ವಶಕ್ಕೆ ಪಡೆದು ಸತ್ಯೇಂದ್ರ ಶರ್ಮಾ ಮತ್ತು ಶಿವಕುಮಾರ್ ಶರ್ಮಾ ಎಂಬರಿಗೆ ಸೇರಿದ ಕಂಪನಿಗಳ ತನಿಖೆಯನ್ನು ಐಟಿ ಅಧಿಕಾರಿಗಳು ಮುಂದುವರಿಸಿದ್ದಾರೆ.