ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಡಿವಿ ಸದಾನಂದಗೌಡ ಅವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ವಿಶೇಷ ಒತ್ತಡ ಹಾಕುವುದು ಪ್ರಥಮ ಜವಾಬ್ದಾರಿ, ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ. ಮೆಟ್ರೋ ದರ ಕಡಿಮೆ ಅಗಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯ ಸರಕಾರ ಮೊದಲು ಒತ್ತಡ ಹಾಕಬೇಕು. ರಾಜ್ಯ ಸರ್ಕಾರ ಕರೆದರೆ ಕೇಂದ್ರದ ಬಳಿಗೆ ನಾವೂ ಜೊತೆಯಾಗಿ ಹೋಗುತ್ತೇವೆಂದು ಹೇಳಿದರು.
ಉದಯಗಿರಿ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯಾವಾಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆಯೋ ಆಗೆಲ್ಲಾ ಒಂದು ಕೋಮಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಪರಮೇಶ್ವರ್’ಗೆ ಕಾನೂನು ಸುವ್ಯವಸ್ಥೆ ನಿಭಾಯಿಸಲು ಬರುತ್ತಿಲ್ಲ. ಸಿಎಂ ತಲೆಯಲ್ಲಿ ಬರೀ ಮುಡಾ ತುಂಬಿದೆ. ಸಿದ್ದರಾಮಯ್ಯ ಹೆಸರಿನಲ್ಲಿ ಇರುವ ಸಿದ್ದ ಎಂಬುದನ್ನು ತೆಗೆಯಬೇಕಾದ ಸ್ಥಿತಿ ಬಂದಿದೆ. ಅ ಮಟ್ಟಕ್ಕೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದಾಗ ಬದಲಾಗಿದ್ದಾರೆ.
ಪರಮೇಶ್ವರ್ ಕೇವಲ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ರಾಜಣ್ಣ, ಜಾರಕಿಹೊಳಿ, ಪರಮೇಶ್ವರ್ ಯಾರು ಮಂತ್ರಿ ಕೆಲಸ ಮಾಡುತ್ತಿಲ್ಲ. ಬರೀ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರ. ಎರಡು ಕಡೆ ಪುಣ್ಯಸ್ನಾನ ಮಾಡಿ ಡಿರೆ ಶಿವರುಮಾರ್ ಅವರ ಪಾಪ ಸ್ವಲ್ಪ ಪರಿಹಾರ ಆಗಿರಬಹುದು. ಸ್ವಯಂಕೃತ ಅಪರಾಧದಿಂದ ಸಿದ್ದರಾಮಯ್ಯ ಕೆಳಗೆ ಇಳಿಯುತ್ತಾರೆ. ಹೈಕಮಾಂಡ್ ಬೆಂಬಲದಿಂದಷ್ಟೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬಹುದು ಎಂದು ತಿಳಿಸಿದರು.