ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು | ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಸರಕಾರಕ್ಕೆ ಆಗ್ರಹ

ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿರುವ ಸಂಘ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪ್ರಸ್ತುತ ಅಡಿಕೆ ಪ್ರಧಾನ ಬೆಳೆಯಾಗುತ್ತಿದ್ದು, ಪಾರಂಪರಿಕ ಕೃಷಿಯಾದ ಅಡಿಕೆಯನ್ನೇ ನಂಬಿ ಕೃಷಿಕರು ಬದುಕುತ್ತಿದ್ದಾರೆ. ಅಡಿಕೆಯನ್ನು ವಿವಿಧ ಆಯುರ್ವೇದ ಔಷಧಗಳಿಗೂ ಉಪಯೋಗ ಮಾಡಬಹುದು ಎಂದು  ಹಲವು ಸಂಶೋಧನೆಗಳಿಂದ ದೃಢವಾಗಿದೆ. ಈಗಾಗಲೇ ಕೃಷಿಕ ಸಂಶೋಧಕ ಬದನಾಜೆ ಶಂಕರ ಭಟ್ಟರು ಅಡಿಕೆಯ ವಿವಿಧ ಔಷಧೀಯ ಗುಣಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಒಂದರ ಸ್ಥಾಪನೆಯು ಸರ್ಕಾರಿ ಮಟ್ಟದಲ್ಲಿ ಅವಶ್ಯವಾಗಿದೆ. ಇದರಿಂದ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ತುಂಬಾ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಅಡಿಕೆಯ ಸಂಭಾವ್ಯ ಪ್ರಯೋಜನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಕೊಡುಗೆ ನೀಡಿದಂತಾಗುತ್ತದೆ.

ಅಲ್ಲದೆ ದ.ಕ. ಜಿಲ್ಲೆಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಇಂಜಿನಿಯರಿಂಗ್ ಶಿಕ್ಷಣ ಲಭ್ಯವಿದೆ. ಆದರೆ ಈ ಭಾಗದಲ್ಲಿ ಯಾವುದೇ ಸರಕಾರಿ ಆಯುರ್ವೇದ ಕಾಲೇಜು ಇರುವುದಿಲ್ಲ. ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ದ.ಕ.ಜಿಲ್ಲೆಯಲ್ಲಿ ಜನಪ್ರಿಯವಾಗಿದೆ. ಪಾಶ್ರ್ವವಾಯು, ಅಸ್ತಮಾ, ಸಂಧಿವಾತ, ಕಾಮಾಲೆ ಹಾಗೂ ಆಧುನಿಕ ಜೀವನಶೈಲಿ ರೋಗಗಳಾದ ಮಧುಮೇಹ ಇತ್ಯಾದಿ ಕಾಯಿಲೆಗಳಿಗೆ ಹೆಚ್ಚಿನ ರೋಗಿಗಳು ಆಯುರ್ವೇದದ ಮೊರೆಹೋಗಿದ್ದಾರೆ. ಈ ಜಿಲ್ಲೆಯಿಂದ ಆಯುರ್ವೇದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಕೂಡಾ ಹೆಚ್ಚಿದ್ದು ಸರಕಾರಿ ಕಾಲೇಜಿನ ಅಲಭ್ಯತೆಯಿಂದ ರಾಜ್ಯ ಹಾಗೂ ದೇಶದ ವಿವಿಧೆಡೆ ಕಲಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಸಂಘ ಆಗ್ರಹಿಸಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top