ಪುತ್ತೂರು: ದಿ ಪುತ್ತೂರು ಕ್ಲಬ್ ಇದರ ಆರು ಕೋ.ರೂ.ವೆಚ್ಚದ ವಿವಿಧ ಹೊಸ ಸೌಲಭ್ಯಗಳನ್ನು ಫೆ.8 ರಂದು ಸಂಜೆ ಉದ್ಘಾಟಿಸಲಾಯಿತು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಸಂಬಂಧ, ಸಂಪರ್ಕ ಬೆಸೆಯುವ ದಿಕ್ಕಿನಲ್ಲಿ ಕ್ಲಬ್ ಮಹತ್ವ ಪಾತ್ರ ವಹಿಸಬೇಕು. ಸಮಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ಕ್ಲಬ್ ತನ್ನ ಪಾತ್ರವನ್ನು ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಪುತ್ತೂರು ಕ್ಲಬ್ ಮುಂದಡಿ ಇಟ್ಟಿರುವುದು ಶ್ಲಾಘನೀಯ ಸಂಗತಿ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ನೆಮ್ಮದಿಗೆ ಪೂರಕವಾದ ಸ್ಥಳಗಳನ್ನು ಗುರುತಿಸಿಕೊಂಡು ಸಮಾನ ಮನಸ್ಸಿನ ಜನರು ಸಮಾಜದ ಜತೆ ಸಂಬಂಧ ಬೆಳೆಸುವಲ್ಲಿ ಕ್ಲಬ್ ಪೂರಕವಾಗಿರಬೇಕು. ಆ ಕೆಲಸ ಪುತ್ತೂರು ಕ್ಲಬ್ ಮೂಲಕ ಆಗಲಿದೆ ಎಂದರು.
ಹವಾನಿಯಂತ್ರಿತ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಂಪತ್ತನ್ನು ಗಳಿಸಿದಾಗ ನೆಮ್ಮದಿಯನ್ನು ಕಳೆದುಕೊಳ್ಳುವ ಈ ಸಮಾಜದಲ್ಲಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಒಟ್ಟಿಗೆ ಕೊಂಡು ಹೋಗಲು ಮನುಷ್ಯನಿಗೆ ವಿಶ್ರಾಂತಿ ತಾಣದ ಅವಶ್ಯಕತೆ ಇದೆ. ಅದು ಯಾವುದೋ ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಲ್ಲಿದೆ. ಇವತ್ತು ಪುತ್ತೂರು ನಗರಸಭೆ ಪ್ರದೇಶದಲ್ಲೂ ಕೂಡಾ ವಿಶ್ರಾಂತಿ ತಂಗುದಾಣ ಹತ್ತು ವರ್ಷದ ಹಿಂದೆ ಪುತ್ತೂರಿನ ಮರೀಲ್ ಭಾಗದಲ್ಲಿ ಆಗಿದೆ. ಇವತ್ತು ಅದು ರಾಜ್ಯದ ಪ್ರತಿಷ್ಠಿತ ಕ್ಲಬ್ ಆಗಿ ಮೂಡಿ ಬಂದಿದೆ. ಆಧುನಿಕತೆಯ ಸೊಗಡನ್ನು ಪುತ್ತೂರಿನ ಜನತೆಗೆ ಕ್ಲಬ್‌ನಿಂದ ನೀಡಲಾಗಿದೆ. ಪುತ್ತೂರಿನ ಜನತೆ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಪುತ್ತೂರು ಮುಂದೆ ಜಿಲ್ಲಾ ಕೇಂದ್ರವಾಗಿ ಮೂಡಿ ಬರಲಿ, ಇಂತಹ ಲಕ್ಷಣ ಕಾಣುತ್ತಿದೆ ಎಂದರು.
ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಯತೀಶ್ ಕೆ, ಐಎಎಸ್ ಅಧಿಕಾರಿ ಜುಬಿನ್ ಮೊಹಪಾತ್ರ, ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ, ಪುತ್ತೂರು ಕ್ಲಬ್‌ನ ದೀಪಕ್ ಕೆ.ಪಿ., ವಿಶ್ವಾಸ್ ಶೆಣೈ, ಖಜಾಂಚಿ ದಿವಾಕರ್ ಕೆ.ಪಿ., ಜತೆ ಕಾರ್ಯದರ್ಶಿ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಪುತ್ತೂರು ಕ್ಲಬ್ ಅದ್ಯಕ್ಷ ಡಾ| ದೀಪಕ್ ರೈ ಪ್ರಸ್ತಾವನೆಗೈದು ಕ್ಲಬ್ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ತನ್ವಿ ಪ್ರಾರ್ಥಿಸಿದರು. ಕ್ಸೇವಿಯರ್ ಡಿಸೋಜ, ಉಪನ್ಯಾಸಕಿ ರಶ್ಮಿ ನಿರೂಪಿಸಿದರು. ನೂತನ ಸದಸ್ಯರಿಗೆ ಕಾರ್ಡ್‌ನ್ನು ವಿತರಿಸಲಾಯಿತು. ಡಿಲೆಕ್ಸ್ ರೂಮ್‌ಗಳು ಮತ್ತು ೨ ಸೂಟ್ ರೂಮ್, ಸಿಂಥೆಟಿಕ್ ಟೆನ್ನಿಸ್ ಕೋರ್ಟ್, ಸಭಾಂಗಣ, ಹವಾನಿಯಂತ್ರಿತ ಕೊಠಡಿ ಮೊದಲಾದ ಸೌಲಭ್ಯಗಳು ಉದ್ಘಾಟಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಸುಹಾನ ಸಫರ್ ಕಾರ್ಯಕ್ರಮ ನಡೆಯಿತು. ಕುಂಬ್ಳೆ ಡಾ. ಅನಂತ ಪ್ರಭು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು. ಕುಂಬ್ಳೆ ನರಸಿಂಹ ಪ್ರಭು ಅವರು ಮಿಮಿಕ್ರಿ ನಡೆಸಿದರು. ವಿದುಷಿ ಪವಿತ್ರಾ ರೂಪೇಶ್, ವಿದ್ಯಾಸುವರ್ಣ ಮತ್ತು ಉಮಾಕಾಂತ್ ನಾಯಕ್, ರಾಜೇಶ್ ಭಾಗವತ್ ಮತ್ತು ತಂಡ ಮುಲ್ಕಿ ವಿವಿಧ ಹಾಡುಗಳನ್ನು ಹಾಡಿದರು.