ದೇಶ ವಿದೇಶಗಳನ್ನು ಆಕರ್ಷಿಸುವ ಏರ್ ಶೋ ಪ್ರಾರಂಭಕ್ಕೆ ಕ್ಷಣಗಣನೆ
ಬೆಂಗಳೂರು: ರೋಮಾಂಚಕಾರಿ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ-2025ʼ ಇಂದಿನಿಂದ ಶುರುವಾಗಲಿದ್ದು, ಇದಕ್ಕಾಗಿ ಬೆಂಗಳೂರು ಸರ್ವಸಜ್ಜಾಗಿದೆ.
ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ–ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ.
ಈ ಬಾರಿ ರನ್ ವೇ ಟು ಬಿಲಿಯನ್ ಆಪರ್ಚುನಿಟಿ ಟ್ಯಾಗ್ ಲೈನ್‌ನಲ್ಲಿ ಏರ್ ಶೋ ಜರುಗಲಿದೆ. 100ಕ್ಕೂ ಹೆಚ್ಚು ದೇಶಗಳ, 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗುತ್ತಿದ್ದು, ಎಐ, ಡ್ರೋನ್, ಗ್ಲೋಬಲ್ ಏರೋಸ್ಪೇಸ್, ಸೇರಿದಂತೆ ನೂತನ ತಂತ್ರಜ್ಞಾನದ ವಿವಿಧ ವಸ್ತುಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಇರಲಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ.
ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಪ್ಟರ್‌ಗಳಿಂದ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಯಲಿದೆ.
ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್, ಸೈಬರ್ ಸೆಕ್ಯೂರಿಟಿ, ಗ್ಲೋಬಲ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100ಕ್ಕೂ ಅಧಿಕ ಕಂಪನಿಗಳ ಸಿಇಒಗಳು, 50 ವಿದೇಶಿ ಒಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿಷಯಗಳನ್ನು ಒಳಗೊಂಡ ಸೆಮಿನಾರ್‌ಗಳು ಇರಲಿವೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ.