ಶಬ್ದ ಕಡಿಮೆ, ಅಪಘಾತವಾದರೂ ಪ್ರಯಾಣಿಕರಿಗೆ ಹಾನಿಯಿಲ್ಲ
ಮಾ.1ರಿಂದ ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೂ ಅತ್ಯಾಧುನಿಕ ಕೋಚ್ ಅಳವಡಿಕೆ
ಉಡುಪಿ : ಕರಾವಳಿ ಕರ್ನಾಟಕ ಮತ್ತು ಮುಂಬಯಿ ನಡುವಿನ ಸಂಪರ್ಕ ಕೊಂಡಿಯಾಗಿರುವ ಮತ್ಸ್ಯಗಂಧ ರೈಲಿಗೆ ಫೆ.17ರಿಂದ ಹೊಸ ರೂಪ ಪಡೆದು ಓಡಲಿದೆ. ಜನರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಅಳವಡಿಸಲಿದೆ.
ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಪ್ರಯಾಣಿಕರು ಯಾವುದೇ ಹಾನಿ ಸಂಭವಿಸದೆ ಸುರಕ್ಷಿತರಾಗಿರುತ್ತಾರೆ. ಎಷ್ಟೇ ತೀವ್ರ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ ZIGZAG ರೀತಿಯಲ್ಲಿ ವರ್ಗೀಕರಣಗೊಂಡು ನಿಂತುಬಿಡುತ್ತವೆ. ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ.

ಫೆಬ್ರವರಿ 17ರಂದು ಈ ಹೊಸ ಕೋಚ್‌ಗಳುಳ್ಳ ರೈಲಿನ ಪ್ರಥಮ ಪ್ರಯಾಣ ನಡೆಸಲಿದ್ದು, ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ರೈಲನ್ನು ಭವ್ಯವಾಗಿ ಸ್ವಾಗತಿಸಲು ತಯಾರಿ ನಡೆದಿದೆ. ರೈಲನ್ನು ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ರೈಲ್ವೆ ಯೋಜನೆಗಳ ಕುರಿತು ಒಂದಷ್ಟು ಚರ್ಚೆಯೂ ನಡೆಯಲಿದ್ದು, ಅಂದು ರೈಲ್ವೆ ಅಧಿಕಾರಿಗಳು ಇರುತ್ತಾರೆ. ರೈಲ್ವೆ ಪ್ರಯಾಣಿಕರು ಕುಂದು-ಕೊರತೆಗಳನ್ನು ರೈಲಿನಲ್ಲಿ ಪ್ರಯಾಣಿಸುತ್ತಲೇ ಚರ್ಚಿಸಲಾಗುವುದು ಎಂದು ಹೊಸ ಕೋಚ್‌ಗಳ ಅಳವಡಿಕೆಗೆ ನಿರಂತರ ಶ್ರಮಿಸಿ ಯಶಸ್ವಿಯಾಗಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಬೆನ್ನಲ್ಲೇ ಕರಾವಳಿಗರ ಇನ್ನೊಂದು ರೈಲು ಮಂಗಳೂರು ಎಕ್ಸ್‌ಪ್ರೆಸ್‌ಗೂ ಮಾರ್ಚ್ 1ರಿಂದ ನೂತನ ಎಲ್‌ಎಚ್‌ಬಿ ಕೋಚ್ ಅಳವಡಿಸಲಾಗುವುದು. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಟ್ಟು ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಿಶೇಷವಾಗಿ ನನ್ನೆಲ್ಲ ಮನವಿಗಳಿಗೆ ಬೆಂಬಲ ನೀಡಿ ಸಹಕರಿಸುವ ಸಚಿವ ವಿ.ಸೋಮಣ್ಣರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದರ ಜೊತೆಗೆ ಕಾಲಕಾಲಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಅಮೂಲ್ಯ ಸಲಹೆಗಳನ್ನು ನೀಡುತ್ತಿರುವ ರೈಲ್ವೆ ಬಳಕೆದಾರರ ಸಮಿತಿಯ ಪ್ರಮುಖರಿಗೂ ವಿಶೇಷ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಶುಭ ಘಳಿಗೆಯಲ್ಲಿ ಅಂದಿನ ಕೇಂದ್ರ ಸಚಿವ ದಿ.ಜಾರ್ಜ್ ಫೆರ್ನಾಂಡಿಸ್ ಅವರ ವಿಶೇಷ ಪರಿಶ್ರಮದಿಂದ ಅಂದಿನ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ ಕಾಳಜಿಯಿಂದ 1998ರ ಮೇ 01ರಂದು ಮತ್ಸ್ಯಗಂಧ ರೈಲು ಕೋಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರ ಆರಂಭಿಸಿತ್ತು. ಅಲ್ಲಿಂದ ಇಂದಿನವರೆಗೂ ಸುದೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ. ಈಗ ಆಧುನಿಕ ಭಾರತದ ದ್ಯೋತಕವಾಗಿ ಈ ರೈಲು ಹೊಸ ತಂತ್ರಜ್ಞಾನದ ಮೂಲಕ ಕಂಗೊಳಿಸಲಿದ್ದು ಪ್ರಯಾಣಿಕರಿಗೆ ವಿಶೇಷ ಸೇವೆಯನ್ನು ನೀಡಲಿದೆ.
ಕರಾವಳಿ ಜನರ ಬಹುಕಾಲದ ಕನಸು ನನಸು
ಕರಾವಳಿ ಕರ್ನಾಟಕ ಹಾಗೂ ಮುಂಬಯಿ ನಡುವಿನ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಅತಿಹೆಚ್ಚು ಪ್ರಯಾಣಿಕರನ್ನು ಒಯ್ಯುವ ಈ ರೈಲು ಭಾಗಶಃ ಶಿಥಿಲಾವಸ್ಥೆಗೆ ಬಂದಿದ್ದು ಅನೇಕ ಪ್ರಯಾಣಿಕರು ಈ ಬಗ್ಗೆ ನನ್ನಲ್ಲಿ ಮನವಿ ಮಾಡಿದ್ದರು. ಅನೇಕರು ವೀಡಿಯೊ ಮೂಲಕ ವ್ಯವಸ್ಥೆಯನ್ನು ಸರಿಪಡಿಸುವ ಸಲಹೆ ನೀಡಿದ್ದರು. ಈ ಎಲ್ಲ ಸಲಹೆ ಹಾಗೂ ಮನವಿಯನ್ನು ಪುರಸ್ಕರಿಸಿ ನಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದು ಸಂಪೂರ್ಣ ವರದಿಯನ್ನು ಅವರ ಮುಂದಿಟ್ಟಿದ್ದೆ. ನನ್ನ ಮನವಿಯನ್ನು ತಕ್ಷಣ ಪುರಸ್ಕರಿಸಿದ ಸಚಿವರು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಕೋಚ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಇದರ ಬೆನ್ನಿಗೆ ಕರಾವೀಯನ್ನು ದೇಶದ ವಾಣಿಜ್ಯ ನಗರಿಯಾದ ಮುಂಬಯಿಯನ್ನು ಬೆಸೆಯುವ ಮಂಗಳೂರು ಎಕ್ಸ್‌ಪ್ರೆಸ್ ರೈಲು ಕೂಡ ಹೋಸ ಕೋಚ್‌ಗಳೊಂದಿಗೆ ಆಧುನಿಕ ಸ್ಪರ್ಶ ಪಡೆದುಕೊಳ್ಳಲಿದೆ.ಕೋಟ ಶ್ರೀನಿವಾಸ ಪೂಜಾರಿ, ಸಂಸದರು.