ಹಠಾತ್‌ ಸಾವುಗಳ ಸಂಶೋಧನೆಗೆ ತಜ್ಞರ ಸಮಿತಿ ರಚನೆ : ಸಿದ್ದರಾಮಯ್ಯ ಆದೇಶ

ಪತ್ರಕರ್ತನ ಪತ್ರಕ್ಕೆ ಸ್ಪಂದಿಸಿ ಸೂಚನೆ ನೀಡಿದ ಸಿಎಂ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯದಿಂದಿರುವವರು ದಿಢೀರ್‌ ಎಂದು ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದಾರೆ, ಅದರಲ್ಲೂ ಯುವಕರು ಮತ್ತು ಮಕ್ಕಳು ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಾವಿಗೀಡಾಗುತ್ತಿರುವುದು ಕಳವಳಕಾರಿಯಾಗಿ ಸಂಭವಿಸುತ್ತಿದೆ. ಈ ಕುರಿತು ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಪತ್ರಕರ್ತರೊಬ್ಬರು ಇ.-ಮೈಲ್‌ನಲ್ಲಿ ಬರೆದ ಪತ್ರವನ್ನು ಪರಿಗಣಿಸಿ ಸಾವುಗಳ ಬಗ್ಗೆ ಸಂಶೋಧನೆ ನಡೆಸಿ ಮುಂದೆ ಈ ರೀತಿ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಹಠಾತ್ ಸಾವುಗಳ ಬಗ್ಗೆ ಗಮನ ಸೆಳೆದು ಪತ್ರಕರ್ತ ರಾಜಾರಾಂ ತಲ್ಲೂರು ಅವರು ಬರೆದ ಪತ್ರಕ್ಕೆ ಸ್ಪಂದಿಸಿ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ಸೂಚನೆ ನೀಡಿದ್ದಾರೆ. ಪತ್ರಕರ್ತ ರಾಜಾರಾಂ ತಲ್ಲೂರು ಇ-ಮೈಲ್ ಮೂಲಕ ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವುದು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ ಎಂದು ತಿಳಿಸಿರುತ್ತಾರೆ. ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿರುತ್ತಾರೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ, ವರದಿ ಪಡೆದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top