ಕಾಂಗ್ರೆಸ್ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ
ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ.
ಚುನಾವಣಾ ಸುಧಾರಣೆಗಳಿಗಾಗಿ ಕೆಲಸ ಮಾಡುವ ಪ್ರಮುಖ ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
545.745 ಕೋಟಿ ರೂ.ಗಳ ಸಂಗ್ರಹಿಸಿರುವ ತೃಣಮೂಲ ಕಾಂಗ್ರೆಸ್ ಎರಡನೇ ಅತಿ ಹೆಚ್ಚು ಆದಾಯ ಗಳಿಸಿದ ಪಕ್ಷವಾಗಿದೆ.
ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ಹಂಚಿಕೊಂಡ ದಾಖಲೆಗಳನ್ನು ಉಲ್ಲೇಖಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದ್ದು, 2021-22ರ ಅವಧಿಯಲ್ಲಿ ಬಿಜೆಪಿ ಒಟ್ಟು ರೂ 1917.12 ಕೋಟಿ ಆದಾಯನ್ನು ಘೋಷಿಸಿಕೊಂಡಿದೆ ಮತ್ತು ಈ ಪೈಕಿ 854.467 ಕೋಟಿ ಖರ್ಚು ಮಾಡಿದೆ. ಕಾಂಗ್ರೆಸ್‌ನ ಒಟ್ಟು ಆದಾಯ 541.27 ಕೋಟಿ ರೂ.ಗಳಾಗಿದ್ದು, 400.41 ಕೋಟಿ ರೂ. ಖರ್ಚು ಮಾಡಿದೆ.
ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಸ್ಥಾನಮಾನಹೊಂದಿರುವ ಎಂಟು ಪಕ್ಷಗಳಲ್ಲಿ ಬಿಜೆಪಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿವೆ.