ಇಷ್ಟಕ್ಕೂ ಈ ಮೋಹಿನಿ ಯಾರು ಗೊತ್ತೆ?
ಮುಂಬಯಿ: ಕಳೆದ ವರ್ಷ ನಿಧನರಾಗಿರುವ ದೇಶದ ಬಹು ಗೌರವಾನ್ವಿತ ಉದ್ಯಮಿ ಟಾಟಾ ಸಮೂಹದ ರತನ್ ಟಾಟಾ ತನ್ನ ಆಸ್ತಿಯಲ್ಲಿ ಒಂದು ದೊಡ್ಡ ಪಾಲನ್ನು ಮೋಹಿನಿ ಎಂಬ ವ್ಯಕ್ತಿಗೆ ಕೊಟ್ಟಿದ್ದಾರೆ. ಟಾಟಾ ಬರೆದಿಟ್ಟಿರುವ ಉಯಿಲಿನಲ್ಲಿ ಮೋಹಿನಿ ಎಂಬ ವ್ಯಕ್ತಿಯ ಹೆಸರು ಕಾಣಿಸಿಕೊಂಡ ಬಳಿಕ ಯಾರು ಈ ಮೋಹಿನಿ ಎಂಬ ಕುತೂಹಲ ಕೆರಳಿದೆ. ಈ ಮೋಹಿನಿಗೆ ಟಾಟಾ ಬರೋಬ್ಬರಿ 500 ಕೋಟಿ ಸಂಪತ್ತು ಕೊಟ್ಟಿದ್ದಾರೆ.
ಟಾಟಾ ಅವಿವಾಹಿತರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಅವರ ಜೀವನದಲ್ಲಿ ಬಂದ ಈ ಮೋಹಿನಿ ಯಾರು? ಮೋಹಿನಿ ಹೆಣ್ಣಲ್ಲ ಗಂಡಸು. ಅವರ ಪೂರ್ತಿ ಹೆಸರು ಮೋಹಿನಿಮೋಹನ್ ದತ್ತಾ ಎಂದು. ಒಂದು ಕಾಲದಲ್ಲಿ ಇವರು ರತನ್ ಟಾಟಾ ಅವರಿಗೆ ಸಹಾಯ ಮಾಡಿದ್ದರು. ಇದನ್ನು ನೆನಪಲ್ಲಿಟ್ಟುಕೊಂಡು ಮೋಹಿನಿಮೋಹನ್ ದತ್ತಾ ಅವರಿಗೆ ಟಾಟಾ 500 ಕೋಟಿ ಸಂಪತ್ತು ನೀಡಿದ್ದಾರೆ. ಟಾಟಾ ಕುಟುಂಬದ ಸದಸ್ಯರು ಮತ್ತು ನಿಕಟವರ್ತಿಗಳಿಗೆ ಕೂಡ ಇದು ಅಚ್ಚರಿ ತಂದಿದೆ.
ಮೋಹಿನಿಮೋಹನ್ ದತ್ತಾ ಹೆಚ್ಚು ಮಂದಿಗೆ ಪರಿಚಿತವಾದ ಹೆಸರಲ್ಲ. ರತನ್ ಟಾಟಾ ಜೊತೆ ಅವರ ಸ್ನೇಹ 64 ವರ್ಷದಷ್ಟು ಹಳೆಯದು. ದತ್ತ ಅವರ ವೃತ್ತಿ ಮತ್ತು ಬಿಸಿನೆಸ್ ಏಳ್ಗೆಯಲ್ಲಿ ರತನ್ ಟಾಟಾ ಪಾತ್ರ ಪ್ರಮುಖವಾಗಿತ್ತು. ಮೋಹಿನಿಮೋಹನ್ ದತ್ತ ಅವರು ಸ್ಟಾಲಿಯನ್ ಎನ್ನುವ ಟ್ರಾವಲ್ ಏಜೆನ್ಸಿ ಇಟ್ಟುಕೊಂಡಿದ್ದವರು. ಟಾಟಾ ಗ್ರೂಪ್ ಒಡೆತನದ ತಾಜ್ ಗ್ರೂಪ್ ಆಫ್ ಹೋಟೆಲ್ಸ್ನ ಭಾಗವಾದ ತಾಜ್ ಸರ್ವಿಸಸ್ ಕಂಪನಿ ಜೊತೆ ಸ್ಟಾಲಿಯನ್ 2013ರಲ್ಲಿ ವಿಲೀನಗೊಂಡಿತು. ಮೋಹಿನಿಮೋಹನ್ ದತ್ತ ಹಾಗೂ ಅವರ ಕುಟುಂಬ ಈ ಸ್ಟಾಲಿಯನ್ನಲ್ಲಿ ಶೇ.80ರಷ್ಟು ಮಾಲೀಕತ್ವ ಹೊಂದಿತ್ತು. ದತ್ತ ಅವರು ಥಾಮಸ್ ಕುಕ್ ಸಂಸ್ಥೆಯೊಂದಿಗೆ ಈ ಹಿಂದೆ ಜೋಡಿತವಾಗಿದ್ದ ಟಿಸಿ ಟ್ರಾವಲ್ ಸರ್ವಿಸಸ್ ಎನ್ನುವ ಕಂಪನಿಯ ನಿರ್ದೇಶಕರೂ ಆಗಿದ್ದರು.
ಮೋಹಿನಿಮೋಹನ್ ದತ್ತ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಒಬ್ಬ ಮಗಳು 2015ರಿಂದ ಒಂಬತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್‌ನಲ್ಲಿ ಕೆಲಸ ಮಾಡಿದ್ದರು. ಈಕೆ ತಾಜ್ ಹೋಟೆಲ್ಸ್ನಲ್ಲೂ ಕೆಲಸ ಮಾಡಿದ್ದಾರೆ.
2024ರ ಅಕ್ಟೋಬರ್ 9ರಂದು ಮೃತಪಟ್ಟ ರತನ್ ಟಾಟಾ ಲಕ್ಷಾಂತರ ಕೋಟಿ ರೂ ಮೌಲ್ಯದ ಉದ್ಯಮದ ಚುಕ್ಕಾಣಿ ಹೊಂದಿದ್ದರು. ಇದರಲ್ಲಿ ವೈಯಕ್ತಿಕವಾಗಿ 8,000 ಕೋಟಿ ರೂ ನಿವ್ವಳ ಮೌಲ್ಯದ ಸಂಪತ್ತನ್ನು ಹೊಂದಿದ್ದರು. ಹೆಚ್ಚಿನ ಸಂಪತ್ತನ್ನು ತಮ್ಮವೇ ಚಾರಿಟಿ ಸಂಸ್ಥೆಗಳಿಗೆ ಧಾರೆ ಎರೆದುಕೊಟ್ಟಿದ್ದಾರೆ. ಟಾಟಾ ಉದ್ಯಮ ವ್ಯವಹಾರದಲ್ಲಿ ಚಾಣಾಕ್ಷತರಾಗಿದ್ದುದು ಮಾತ್ರವಲ್ಲ, ಮಾನವೀಯತೆಯ ಪ್ರತಿಮೂರ್ತಿಯೂ ಎನಿಸಿದ್ದರು.