ಹಾರರ್ ಸಿನಿಮಾ ರೀತಿ ನಡೆಯುತ್ತಿರುವ ಘಟನೆಗಳಿಂದ ಮನೆಮಂದಿ ಕಂಗಾಲು
ಬೆಳ್ತಂಗಡಿ: ನೋಡು ನೋಡುತ್ತಿದ್ದಂತೆ ಬಟ್ಟೆಗೆ ಬೆಂಕಿ ಹತ್ತಿಕೊಂಡು ಉರಿಯತೊಡಗುತ್ತದೆ, ತಟ್ಟೆಬಟ್ಟಲುಗಳು ಉರುಳಿ ಬೀಳುತ್ತವೆ, ಎಲ್ಲೋ ಇಟ್ಟ ವಸ್ತು ಇನ್ನೊಂದು ಕಡೆ ಇರುತ್ತದೆ, ಬಲ್ಬ್, ಟ್ಯೂಬ್‌ಗಳು ತಮ್ಮಿಂದ ತಾನೇ ಆನ್-ಆಫ್ ಆಗುತ್ತವೆ… ಇದು ಯಾವುದೋ ದೆವ್ವದ ಕಥೆಯ ಸಿನಿಮಾ ದೃಶ್ಯವಲ್ಲ ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪ ಕೊಲ್ಪೆದಬೈಲು ಎಂಬಲ್ಲಿರುವ ಮನೆಯೊಂದರಲ್ಲಿ ಕಳೆದ ಮೂರು ತಿಂಗಳಿಂದ ಆಗಾಗ ನಡೆಯುತ್ತಿರುವ ವಿಚಿತ್ರ ಘಟನೆಗಳು.
ಸೆಂಟ್ರಿಂಗ್ ಕೆಲಸ ಮಾಡುವ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆಯುತ್ತಿದ್ದು, ಇದನ್ನು ನೋಡುವ ಸಲುವಾಗಿ ನಿತ್ಯ ನೂರಾರು ಜನ ಅವರ ಮನೆ ಬಳಿ ಸೇರುತ್ತಿದ್ದಾರೆ. ಪತ್ನಿ ವಿನೋದಾ ಮತ್ತು ಮಕ್ಕಳಾದ ನಿಖಿತಾ ಮತ್ತು ರಕ್ಷಿತಾ ಜೊತೆ ಈ ಮನೆಯಲ್ಲಿ ಉಮೇಶ್ ಶೆಟ್ಟಿ ವಾಸವಾಗಿದ್ದಾರೆ. ಮಕ್ಕಳಿಬ್ಬರೂ ಇನ್ನೂ ಕಲಿಯುತ್ತಿದ್ದಾರೆ.
ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಪ್ರೇತ ಚೇಷ್ಟೆ ಶುರುವಾಗುತ್ತದೆ. ಮನೆಯಲ್ಲಿರುವ ಬಟ್ಟೆಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ಳುವುದು, ಅಡುಗೆ ಕೋಣೆಯಲ್ಲಿರುವ ಬಟ್ಟಲು ಲೋಟ, ಚೊಂಬು, ಬೀಳುವುದು, ವಿದ್ಯುತ್ ಬಲ್ಬ್‌ಗಳು ಆನ್-ಆಫ್ ಆಗುವುದು ನಡೆಯುತ್ತದೆ. ಮನೆಯ ಒಳಗಿದ್ದ ವಸ್ತುಗಳು ಚಲಿಸುವುದು ಮೊದಲಾದ ವಿಚಿತ್ರಕಾರಿ ಘಟನೆಗಳು ಕಣ್ಣೆದುರಿಗೆ ನಡೆಯುತ್ತವೆ.
ಹಲವು ಸಲ ವಿನೋದಾ ಅವರಿಗೆ ತನ್ನ ಕುತ್ತಿಗೆಯನ್ನು ಯಾರೋ ಒತ್ತಿ ಹಿಡಿದ ಅನುಭವವಾಗಿದೆ. ಉಸಿರುಕಟ್ಟಿದಂತಾಗಿ ಅವರು ಒದ್ದಾಡಿ ಮನೆಯವರಿಗೆ ಆತಂಕ ಉಂಟುಮಾಡಿದ್ದಾರೆ. ಈ ವಿಚಿತ್ರ ಘಟನೆಗಳಿಂದ ಭಯಭೀತರಾದ ಉಮೇಶ್ ಶೆಟ್ಟಿಯವರು ಹಲವಾರು ಜೋತಿಷಿಗಳ ಬಳಿ ಪ್ರಶ್ನಾಚಿಂತನೆ ನಡೆಸಿದ್ದಾರೆ. ಜೋತಿಷಿಗಳು ಮಂತ್ರಿಸಿ ಕೊಟ್ಟ ಪ್ರಸಾದ ತಂದು ಮನೆಯಲ್ಲಿಟ್ಟರೆ ಅದು ಕೂಡ ಮಾಯವಾಗಿರುತ್ತದೆ. ಪತ್ನಿ, ಮಕ್ಕಳಿಗೆ ಕಟ್ಟಿದ ಮಂತ್ರಿಸಿ ನೂಲು ಕೂಡ ಮಾಯಾವಾಗಿದೆ, ಮೈ ಮೇಲೆ ಧರಿಸಿದ ಬಂಗಾರ, ಮನೆಯಲ್ಲಿದ್ದ ಬಂಗಾರ ಕೂಡ ಮಾಯಾವಾಗಿದೆ ಎನ್ನುತ್ತಾರೆ ಉಮೇಶ್ ಶೆಟ್ಟಿ.

ಸಣ್ಣ ಮಗಳು ರಕ್ಷಿತಾಗೆ ಮನೆಯಲ್ಲಿ ನಡೆಯುವ ಈ ವಿಚಿತ್ರ ಘಟನೆಗಳು ಗೋಚರಿಸುತ್ತಿವೆಯಂತೆ, ಓದಲು ಕುಳಿತರೆ ಪ್ರೇತದಂತೆ ಏನೋ ಚಲಿಸುವುದು ಕಣ್ಣಿಗೆ ಕಾಣುತ್ತದೆ. ಒಂದು ದಿನ ಆಕೆ ತನ್ನ ಮೊಬೈಲ್‌ನಲ್ಲಿ ಅದರ ಫೋಟೊ ತೆಗೆದಿದ್ದು, ಅದು ಮಸುಕಾಗಿ ಬಂದಿದೆ. ಗಂಡು ಅಥವಾ ಹೆಣ್ಣು ಎಂದು ಗುರುತಿಸಲು ಸಾಧ್ಯವಾಗದ ಹೆಣವನ್ನು ಮಲಗಿಸಿದ ರೀತಿಯಲ್ಲಿ ಚಿತ್ರ ಮೂಡಿದ್ದು, ತಲೆ ಬಿಟ್ಟರೆ ಉಳಿದ ಭಾಗ ಕಪ್ಪಾದಂತೆ ಕಂಡು ಬಂದಿದೆ ಎಂದು ಉಮೇಶ್ ಶೆಟ್ಟಿ ಹೇಳುತ್ತಾರೆ. ಈ ಫೋಟೊ ಸ್ಥಳೀಯವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೋತಿಷಿಯೊಬ್ಬರ ಸಲಹೆಯಂತೆ ರಾತ್ರಿ ಬಟ್ಟಲಲ್ಲಿ ನಿಂಬೆಹಣ್ಣು ಇಟ್ಟು ಅದರ ಸುತ್ತ ಬಿಳಿ ಪೌಡರನ್ನು ಚೆಲ್ಲಿದ್ದರು. ಬಟ್ಟಲಲ್ಲಿ ಇಟ್ಟ ನಿಂಬೆಹಣ್ಣು ರಾತ್ರಿ ಜೋರಾಗಿ ತಿರುಗುತ್ತಿತ್ತಂತೆ, ಬಟ್ಟಲಿನ ಸುತ್ತ ಹಾಕಿದ ಪೌಡರನ್ನು ಬೆಳಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮನುಷ್ಯನ ಪಾದದ ಅಚ್ಚು ತಿರುಚಿದ ರೀತಿ
ಕಂಡು ಬಂದಿದೆಯಂತೆ. ಕೆಲದಿನಗಳ ಹಿಂದೆ ದೇವಸ್ಥಾನದಿಂದ ಎರಡು ಬಾಟಲಿ ತೀರ್ಥ ತಂದಿದ್ದರು. ಒಂದು ಬಾಟಲಿಯ ತೀರ್ಥ ಮನೆಗೆ ಬರುವಾಗಲೇ ಪೂರ್ತಿ ಖಾಲಿಯಾಗಿತ್ತು. ಇನ್ನೊಂದು ಬಾಟಲಿಯಲ್ಲಿ ಅರ್ಧ ತೀರ್ಥ ಇತ್ತು. ಸಂಜೆಯಾಗುವ ಹೊತ್ತಿಗೆ ಅದು ಖಾಲಿಯಾಯಿತಂತೆ. ದೇವರ ಪ್ರಸಾದ ತಂದಿಟ್ಟರೆ ಅದು ಮಾಯಾವಾಗುತ್ತಿದೆಯಂತೆ.

ಕೆಲ ದಿನಗಳಿಂದ ಬೆಳಗೆದ್ದು ನೋಡುವಾಗ ಉಮೇಶ್ ಶೆಟ್ಟಿಯವರ ಸ್ಕೂಟಿಯಲ್ಲಿ ಪ್ರಸಾದ ಕಂಡು ಬರುತ್ತಿದೆ. ಯಾರು ಪ್ರಸಾದ ತಂದಿಡುತ್ತಾರೆ ಎಂದು ನೋಡಲು ಒಂದು ದಿನ ಕಾದು ಕುಳಿತಿದ್ದರು ಆದರೆ ಆ ದಿನ ಪ್ರಸಾದ ಇರಲಿಲ್ಲ, ಆದರೆ ಬೇರೆಡೆಗೆ ಹೋಗಿ ಅಲ್ಲಿನ ಕೆಲಸ ಮುಗಿಸಿಕೊಂಡು ಸ್ಕೂಟಿ ಬಳಿ ಬಂದಾಗ ಪ್ರಸಾದ ಕಂಡು ಬಂದಿದೆಯಂತೆ.
ಬಡವರಾದ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಕಂಡು ಬರುತ್ತಿರುವ ಈ ವಿಚಿತ್ರ ಘಟನೆಗಳನ್ನು ನೋಡಲು ಪ್ರತಿದಿನ ನೂರಾರು ಮಂದಿ ಬರುತ್ತಿದ್ದಾರೆ. ಕೆಲವು ಧೈರ್ಯಶಾಲಿಗಳು ಮನೆಯ ಲೈಟ್‌ಗಳನ್ನೆಲ್ಲ ನಂದಿಸಿ ಕತ್ತಲಲ್ಲಿ ಕಾದು ಕುಳಿತು ಪರಿಶೀಲಿಸಿದ್ದಾರೆ. ಆಗ ಯಾವುದೇ ಘಟನೆ ಅವರ ಅರಿವಿಗೆ ಬಂದಿಲ್ಲ. ಹತ್ತಿರದ ಮನೆಯವರು ಲೋಟ, ಪಾತ್ರೆ ಬೀಳುವುದನ್ನು ಕಂಡಿದ್ದೇವೆ ಎನ್ನುತ್ತಾರೆ. ಜೋತಿಷಿಗಳಲ್ಲಿ ಕೇಳಿದಾಗ ಇದು ಪ್ರೇತ ಮತ್ತು ಮಂತ್ರದೇವತೆ ದೈವದ ಭಾದೆ. ದೈವವನ್ನು ನಂಬಬೇಕು, ಪ್ರೇತವನ್ನು ಉಚ್ಚಾಟಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೆವ್ವ, ಭೂತ, ಪ್ರೇತಗಳನ್ನು ನಂಬುವವರು ಇದ್ದಾರೆ, ನಂಬದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಈ ಕಾಲದಲ್ಲೂ ಇಂಥ ಘಟನೆ ನಡೆಯುತ್ತಿರುವುದು ಮಾತ್ರ ನಿಗೂಢವಾಗಿ ಉಳಿದಿದೆ. ಪಾತ್ರೆಗಳನ್ನು ಎಸೆಯುವುದು, ಬಟ್ಟೆಗಳನ್ನು ಸುಡುವಂಥ ಸಣ್ಣಪುಟ್ಟ ಚೇಷ್ಟೆಗಳಿಗೆ ಈ ದೆವ್ವದ ಕಾಟ ಸೀಮಿತವಾಗಿದೆ. ಇಷ್ಟರ ತನಕ ಯಾರಿಗೂ ದೊಡ್ಡಮಟ್ಟದ ಹಾನಿ ಮಾಡಿಲ್ಲ. ಆದರೆ ಬಡವರಾದ ಉಮೇಶ್ ಶೆಟ್ಟಿ ಕುಟುಂಬ ಮಾತ್ರ ಈ ಚೇಷ್ಟೆಗಳಿಂದ ಕಂಗಾಲಾಗಿ ಹೋಗಿದೆ.