ಎರ್ನಾಕುಲಂ: ಮೆಣಸಿನಕಾಳನ್ನು ಕೀಳುವಾಗ ಆಯ ತಪ್ಪಿ ತಮ್ಮ ಮನೆಯ ಬಾವಿಗೆ ಬಿದ್ದ ತನ್ನ ಪತಿಯನ್ನು 56 ವರ್ಷದ ಮಹಿಳೆಯೊಬ್ಬರು ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.
64 ವರ್ಷದ ರಮೇಶನ್ ಎಂಬವರು ಮೆಣಿಸಿನ ಬಳ್ಳಿಯಿಂದ ಮೆಣಸಿನ ಕಾಳನ್ನು ಕೀಳುವಾಗ ಏಣಿ ಜಾರಿದ್ದು, ಮರವು ಬಾವಿಯ ಸನಿಹದಲ್ಲೇ ಇದ್ದುದರಿಂದ ರಮೇಶನ್ ಬಾವಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ತನ್ನ ಪತಿಯು ಕಿರುಚಿಕೊಳ್ಳುತ್ತಿರುವ ಸದ್ದನ್ನು ಕೇಳಿದ ಮನೆಯೊಳಗಿದ್ದ ಪದ್ಮಾ ಹೊರಗೆ ಓಡಿ ಬಂದಿದ್ದಾರೆ. ತನ್ನ ಪತಿಯು 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡು ಕ್ಷಣಕಾಲ ಕಂಗಾಲಾಗಿದ್ದಾರೆ. ಕೆಲ ಹೊತ್ತು ಕೂಗಾಡುತ್ತಾ, ಅಳುತ್ತಾ ಅವರು ಹಗ್ಗವನ್ನು ಬಳಸಿಕೊಂಡು ನಿಧಾನವಾಗಿ ಬಾವಿಗಿಳಿದಿದ್ದಾರೆ. ಬಾವಿಯ ತಳವನ್ನು ತಲುಪಿದಾಗ, ಸುಮಾರು ಐದು ಅಡಿ ನೀರು ಹೊಂದಿದ್ದ ಬಾವಿಯಿಂದ ತನ್ನ ಪತಿ ರಮೇಶನ್ ರನ್ನು ಮೇಲಕ್ಕೆತ್ತಿರುವ ಹಿಡಿದುಕೊಂಡಿದ್ದಾರೆ.
ಈ ವೇಳೆಗೆ ಸ್ಥಳೀಯರು ಅಲ್ಲಿ ನೆರೆದಿದ್ದು, ಸುಮಾರು 20 ನಿಮಿಷಗಳ ನಂತರ ಸ್ಥಳಕ್ಕೆ ಅಗ್ನಿ ಶಾಮಕ ದಳದ ರಕ್ಷಣಾ ತಂಡವು ಧಾವಿಸಿದೆ. ಈ ವೇಳೆ “ಯಾರೂ ಕೆಳಗೆ ಬರುವುದು ಬೇಡ, ಬದಲಿಗೆ ಬಲೆಯೊಂದನ್ನು ಕಳಿಸಿ” ಎಂದು ಪದ್ಮಾ ಅವರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹೇಳಿದರು.ನಂತರ ಇಬ್ಬರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
40 ಅಡಿ ಆಳದ ಬಾವಿಗೆ ಇಳಿದಿದ್ದರಿಂದ ಆಕೆಯ ಹಸ್ತಗಳು ಸಂಪೂರ್ಣವಾಗಿ ತರಚಿ ಹೋಗಿದ್ದವು. ನಾವು ರಮೇಶನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅವರು ಆರೋಗ್ಯವಾಗಿದ್ದಾರೆ. ಆದರೆ, ಪದ್ಮ ಅವರು ತೋರಿದ ಧೈರ್ಯವಂತಿಕೆ ಪ್ರಶಂಸನೀಯವಾಗಿದೆ” ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಶ್ಲಾಘಿಸಿದ್ದಾರೆ.