ಪುತ್ತೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇವರು ನೀಡುವ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಬಾವನಾ ಪ್ರಶಸ್ತಿಗೆ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಆಯ್ಕೆಗೊಂಡಿದ್ದಾರೆ.
ಯುವಜನ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಶ್ರೀಕಾಂತ್ ಬಿರಾವು ಸಾಹಿತ್ಯ, ಬರವಣಿಗೆ, ತರಬೇತಿ, ಸಂಪನ್ಮೂಲ ವ್ಯಕ್ತಿಯಾಗಿ ಇನ್ನಿತರ ಕ್ಷೇತ್ರದಲ್ಲಿ ಅಪ್ರತಿಮ ಸಾಧಕರಾಗಿದ್ದಾರೆ. ತರಬೇತುದಾರರಾಗಿ ರಾಜ್ಯಾದ್ಯಂತ ಒಟ್ಟು 500 ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ಅಯೋಜಿಸಿ ಸುಮಾರು 80 ಸಾವಿರ ಯುವಜನರಿಗೆ ಜೀವನ ಕೌಶಲ್ಯ, ವೃತ್ತಿ ಮಾರ್ಗದರ್ಶನ, ನಾಯಕತ್ವ ತರಬೇತಿ, ಉದ್ಯಮಶೀಲತಾ ತರಬೇತಿ ಇನ್ನಿತರ ವಿಷಯಗಳ ಕುರಿತಾಗಿ ಶಾಲಾ ಕಾಲೇಜು, ಯುವಕ ಯುವತಿ ಮಂಡಲ ಮುಂತಾದವರಿಗೆ ತರಬೇತಿ ನೀಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಉದ್ಯೋಗ ಮೇಳವನ್ನು ಅಯೋಜಿಸಿ ಹಲವಾರು ಯುವಜನರಿಗೆ ಉದ್ಯೋಗಕ್ಕೆ ನೇರವಾಗಿದ್ದಾರೆ. ಈಗಿನ ಸಾಮಾಜಿಕ ಪಿಡುಗುಗಳಾದ ಸಾಮಾಜಿಕ ಜಾಲತಾಣ, ಮಾದಕ ವ್ಯಸನ ಕುರಿತಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಕಾರ್ಯಕ್ರಮ ವನ್ನು ಅಯೋಜಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಹಲವಾರು ಯುವಜನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಿಟಿಸಿರುತ್ತಾರೆ. ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಯೂತ್ ಚಾಂಪಿಯನ್ ಆಗಿ ಭಾಗವಹಿಸಿದ ಅವರು ಕರ್ನಾಟಕ ಮತ್ತು ಕೇರಳದ ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಇದರ ಜೀವನ ಕೌಶಲ್ಯ ಮತ್ತು ಉದ್ಯಮಶೀಲತಾ ತರಬೇತುದಾರರಾಗಿರುತ್ತಾರೆ. ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಫಂಡ್ ಇದರ ವೃತ್ತಿ ಮಾರ್ಗದರ್ಶನ ತರಬೇತುದಾರರಾಗಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಇದರ ಜೀವನ ಕೌಶಲ್ಯ ತರಬೇತುದಾರರಾಗಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನ, ಕವಿಗೊಷ್ಠಿಗಳಲ್ಲಿ ಭಾಗವಹಿಸಿದ ಇವರು ಉತ್ತಮ ಬರಹಗಾರರು ಇವರ ಲೇಖನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಯುವಜನ ಸಂಬಂಧಿಸಿದ ಸಾಧನೆಗೆ ಕರ್ನಾಟಕ ಸರಕಾರದಿಂದ ರಾಜ್ಯ ಅತ್ಯುತ್ತಮ ಜೀವನ ಕೌಶಲ್ಯ ಸುಗಮಕಾರ ಪ್ರಶಸ್ತಿ, ಮಾಮ್ ಇನ್ಸ್ ಫೈರ್ ಆವಾರ್ಡ್, ರಾಜ್ಯ ಸಾಧನಶ್ರೀ ಪ್ರಶಸ್ತಿ, ಸಾಹಿತ್ಯ ಸರಸ್ಪತಿ ಬಿರುದು ಲಭಿಸಿದೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ ಹಿ ಪ್ರಾ ಶಾಲೆ ರಾಗಿಕುಮೇರಿ ಬಪ್ಪಳಿಗೆ, ಫ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು ಕೊಂಬೆಟ್ಟು, ಪದವಿ ಶಿಕ್ಷಣ ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರರಾದ ಇವರು ಪುತ್ತೂರು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾಗಿದ್ದಾರೆ.
ಪುತ್ತೂರು ಬಿರಾವು ಎಂಬಲ್ಲಿ ತಾಯಿ ಸುಶೀಲಾ, ಪತ್ನಿ ಲಾವಣ್ಯ ಅಂಚನ್, ತಮ್ಮ ಮೋಹನ್ ರವರೊಂದಿಗೆ ವಾಸವಿದ್ದಾರೆ. ಫೆಬ್ರವರಿ 5 ರಂದು ಮುದ್ದೇಬಿಹಾಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.