ಸೂತ್ರ ಕಿತ್ತ ಗಾಳಿಪಟ ರಾಜ್ಯ ಬಿಜೆಪಿ ನಾಯಕತ್ವ

ಅಂತ್ಯ ಕಾಣದ ಕಚ್ಚಾಟದಿಂದ ಕಾರ್ಯಕರ್ತರಿಗೆ ಹತಾಶೆ

ಬೆಂಗಳೂರು: ಬಿಜೆಪಿಯ ಒಳಜಗಳ ಪರಾಕಾಷ್ಠೆಗೆ ತಲುಪಿದ್ದು, ಸದ್ಯ ಪಕ್ಷ ಗಟ್ಟಿ ನಾಯಕತ್ವವಿಲ್ಲದೆ ಸೂತ್ರ ಕಡಿದ ಗಾಳಿಪಟದಂತೆ ಸಿಕ್ಕದಲ್ಲೆಡೆಗೆ ಹಾರಾಡುತ್ತಿದೆ. ಕಳೆದ ಕೆಲವು ತಿಂಗಳಿಂದೀಚೆಗೆ ನಡೆಯುತ್ತಿರುವ ಬಣ ಜಗಳಕ್ಕೆ ಮದ್ದರೆಯಲು ಬಿಜೆಪಿ ಹೈಕಮಾಂಡ್‌ಗೆ ಸಾಧ್ಯವಾಗದಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.
ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಡಲು ಸಾಕಷ್ಟು ವಿಷಯಗಳಿದ್ದರೂ ಪ್ರಮುಖ ವಿಪಕ್ಷವಾಗಿರುವ ಬಿಜೆಪಿ ನಾಯಕರು ತಮ್ಮಲ್ಲೇ ಕಚ್ಚಾಡುತ್ತಾ ಕಾಲಹರಣ ಮಾಡುತ್ತಿರುವುದನ್ನು ಕಂಡು ಕಂಗಾಲಾಗಿರುವ ಸಾಮಾನ್ಯ ಕಾರ್ಯಕರ್ತರು ಮುಂದೇನು ಎಂದು ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ. ಇಷ್ಟುಮಾತ್ರವಲ್ಲ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆಗೆ ಸಖ್ಯ ಮಾಡಿಕೊಂಡಿರುವ ಜೆಡಿಎಸ್‌ಗೂ ಈ ಕಚ್ಚಾಟ ಕಂಡು ಭವಿಷ್ದ ಬಗ್ಗೆ ಆತಂಕ ಶುರುವಾಗಿದೆ.
ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಲ್ಲಿ ಈ ಪರಿಯ ಆಂತರಿಕ ಕ್ಷೋಭೆ ಕಾಣಿಸಿಕೊಂಡಿರುವುದು ಇದೇ ಮೊದಲು. ಸ್ಥಳೀಯ ನಾಯಕತ್ವ ದುರ್ಬಲವಾದರೆ ಪಕ್ಷ ಹೇಗೆ ಅತಂತ್ರವಾಗುತ್ತದೆ ಎನ್ನುವುದಕ್ಕೆ ಬಿಜೆಪಿಯೇ ಈಗ ಅತ್ಯುತ್ತಮ ಉದಾಹರಣೆ. ಆರಂಭದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದ ನಡುವೆ ಶುರುವಾದ ಕಚ್ಚಾಟ ಈಗ ನಾನಾ ತಿರುವುಗಳನ್ನು ಪಡೆದುಕೊಂಡು ಎಲ್ಲೆಲ್ಲೂ ಹೋಗಿ ತಲುಪಿದೆ. ಒಂದೆಡೆ ಯತ್ನಾಳ್‌-ರಮೇಶ್‌ ಜಾರಕಿಹೊಳಿ ಬಣ, ಇನ್ನೊಂಡೆದೆ ಬಳ್ಳಾರಿಯಿಂದ ಶ್ರೀರಾಮುಲು, ಮತ್ತೊಂದೆಡೆ ಹಿರಿಯ ನಾಯಕ ಸದಾನಂದ ಗೌಡ, ವಿಪಕ್ಷ ನಾಯಕ ಆರ್‌.ಅಶೋಕ್‌, ಕುಮಾರ್‌ ಬಂಗಾರಪ್ಪ. ಡಾ.ಸುಧಾಕರ್‌ ಹೀಗೆ ನಾಯಕರೆಲ್ಲ ಪಕ್ಷವನ್ನು ತಮಗಿಷ್ಟ ಬಂದ ಕಡೆ ಎಳೆಯುತ್ತಾ ದಿಕ್ಕುತಪ್ಪಿಸಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಬಲಿಷ್ಠ ಹೈಕಾಂಡ್‌ ಏಕೆ ಮೌನವಾಗಿ ಉಳಿದಿದೆ ಎನ್ನುವುದು ಕಾಡುತ್ತಿರುವ ಪ್ರಶ್ನೆ.
ಬಿಜೆಪಿಗೆ ಜಿಲ್ಲಾಧ್ಯಕ್ಷರ ನೇಮಕವಾಗುವುದರೊಂದಿಗೆ ಆಂತರಿನ ಕಚ್ಚಾಟ ತೀವ್ರಗೊಂಡಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಥಾನದಲ್ಲಿ ಮುಂದುವರಿಯಲಿದ್ದಾರೆಯೇ? ಅವರನ್ನು ಬದಲಾಯಿಸಿದರೆ ಪರಿಣಾಮ ಏನಾಗಬಹುದು? ಭಿನ್ನಮತೀಯರ ಕೈಗೆ ಪಕ್ಷದ ಸಾರಥ್ಯ ಹೋಗಬಹುದೇ ಎಂಬಿತ್ಯಾದಿ ಚರ್ಚೆ ನಡೆಯುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿ ತಲುಪಿದೆ.

ಶತಾಯ ಗತಾಯ ವಿಜಯೇಂದ್ರ ಬದಲಾವಣೆಗೆ ಪಟ್ಟುಹಿಡಿದು ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ಭಿನ್ನಮತೀಯರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಧಾವಂತದಲ್ಲಿದ್ದಾರೆ. ಇತ್ತ ವಿಜಯೇಂದ್ರ ಪರವಿರುವ ನಾಯಕರು ಭಿನ್ನಮತೀಯ ನಾಯಕರನ್ನು ಪಕ್ಷದಿಂದಲೇ ಉಚ್ಛಾಟಿಸುವಂತೆ ಆಗ್ರಹಿಸುತ್ತಿದ್ದಾರೆ. ಇಬ್ಬರ ಆಗ್ರಹಗಳ ನಡುವೆ ಹೈಕಮಾಂಡ್ ನಾಯಕರು ಯಾವ ನಿರ್ಧಾರಕ್ಕೆ ಬರಲಿದ್ದಾರೆಂಬುದು ಕುತೂಹಲ ಮೂಡಿಸಿದೆ.

































 
 

ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ನಿರ್ಣಾಯಕ ಪಾತ್ರ ವಹಿಸಿದ್ದು, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಹೇಳುವುದು ಸರಿಯಲ್ಲ ಎಂದು ವಿಜಯೇಂದ್ರ ಪರವಿರುವ ನಾಯಕರು ವಾದಿಸಿದ್ದಾರೆ. ಆದರೆ ಇತ್ತೀಚಿನ ಉಪಚುನಾವಣೆಯ ಸೋಲಿನ ವಿಚಾರ ಇಟ್ಟು, ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಬಂಡಾಯ ನಾಯಕರು ಆಗ್ರಹಿಸಿದ್ದಾರೆ.

ಮೂರು ಕ್ಷೇತ್ರಗಳ ಉಪಚುನಾವಣೆಯ ಪೈಕಿ ಒಂದು ಕ್ಷೇತ್ರ ಮಾತ್ರ ಬಿಜೆಪಿಗೆ ಸೇರಿತ್ತು. ಉಳಿದ ಸ್ಥಾನಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಿತ್ತು. ಹೀಗಾಗಿ ಇತರ ಸೋಲಿನ ಹೊಣೆಯನ್ನು ವಿಜಯೇಂದ್ರ ಅವರ ಮೇಲೆ ಹಾಕಬಾರದು ಎನ್ನುವುದು ವಿಜಯೇಂದ್ರ ಪರವಾಗಿರುವವರ ವಾದ. ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಜಯೇಂದ್ರ ಮತ್ತು ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದ್ದು, ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಯತ್ನಾಳ್ ಒಬ್ಬ ರಾಜಕೀಯ ಅವಕಾಶವಾದಿ. ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಮತ್ತು ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಯತ್ನಾಳ್ ಈಗ ಸಾವಿರಾರು ಕೋಟಿಗಳ ಒಡೆಯ. ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಇದಕ್ಕೆ ನಿಮಗೆ ಎಲ್ಲಿಂದ ಹಣ ಬಂತು? ಅವರ ಬಂಡವಾಳ ಎಲ್ಲ ಗೊತ್ತಿದೆ ಎಂದು ಪಕ್ಷದ ನಾಯಕನನ್ನೇ ಬಿಜೆಪಿಯವರು ಹಣಿಯುತ್ತಿದ್ದಾರೆ. ಯತ್ನಾಳ್, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಉಚ್ಛಾಟಿಸಬೇಕು. ಮೂರು–ನಾಲ್ಕು ಜನ ಸೇರಿಕೊಂಡು ದಿಲ್ಲಿಗೆ ಹೋದರೆ ಇಡೀ ಪಕ್ಷವೇ ಹೋಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎನ್ನುವುದು ವಿಜಯೇಂದ್ರ ಕ್ಯಾಂಪಿನ ಆರೋಪ.

ಯತ್ನಾಳ್‌ ಬಣದ ಸದ್ಯದ ಗುರಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವುದು. ಹಾಗೊಂದು ವೇಳೆ ಇದು ಸಾಧ್ಯವಾದರೆ ಬಿಜೆಪಿ ಅಧ್ಯಕ್ಷ ಹುದ್ದೆ ಏರಲು ಹಲವು ಮಂದಿ ತಯಾರಾಗಿದ್ದಾರೆ. ಶ್ರೀರಾಮುಲು, ಕುಮಾರ್‌ ಬಂಗಾರಪ್ಪ ಈ ಪೈಕಿ ಪ್ರಮುಖರು. ಇಬ್ಬರೂ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಸ್‌.ಆರ್‌.ಬೊಮ್ಮಾಯಿ ಕೂಡ ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿರುವುದು ಪಕ್ಷದ ಬಂಡಾಯದ ಲೇಟೆಸ್ಟ್‌ ಬೆಳವಣಿಗೆ. ವಿಜಯೇಂದ್ರ ಹಿರಿಯರನ್ನು, ಅನುಭವಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ, ಕಾಂಗ್ರೆಸ್‌ ನಾಯಕರ ಜೊತೆ ಅಡ್ಜೆಸ್ಟ್‌ಮೆಂಟ್‌ ರಾಜಕೀಯ ಮಾಡುತ್ತಾರೆ ಎನ್ನುವುದು ಬಂಡಾಯ ಎದ್ದಿರುವವರ ಪ್ರಮುಖ ಆರೋಪಗಳು.

ಇವರೆಲ್ಲರ ನಡುವೆ ಬಿಜೆಪಿಯಲ್ಲಿ ಒಂದಷ್ಟು ತಟಸ್ಥ ನಾಯಕರೂ ಇದ್ದಾರೆ. ಇವರಿಗೂ ಪಕ್ಷದ ಈ ಕಚ್ಚಾಟ ಆತಂಕ ತಂದಿದೆ. ಆದರೆ ಅವರು ಯಾವ ಬಣದಲ್ಲೂ ಗುರುತಿಸದೆ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಎಲ್ಲ ಗೊಂದಲಗಳು ಬಗೆಹರಿಯುತ್ತವೆ ಎಂದು ಪಕ್ಷದ ಕೆಲವು ನಾಯಕರು ಹೇಳುತ್ತಿದ್ದರೂ ಸದ್ಯಕ್ಕೆ ಅಂಥ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top