ಅದಾನಿ ಪುತ್ರ ಜೀತ್ ಅದಾನಿಯಿಂದ ವಿಶೇಷ ಚೇತನರಿಗೆ ಮದುವೆ ಉಡುಗೊರೆ
ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ತನ್ನ ಮದುವೆ ಸಂದರ್ಭದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ಮದುವೆಗೆ ತಲಾ 10 ಲ.ರೂ.ಯಂತೆ ದೇಣಿಗೆ ನೀಡುವುದಾಗಿ ಜೀತ್ ಅದಾನಿ ವಾಗ್ದಾನ ಮಾಡಿದ್ದಾರೆ.
ಜೀತ್ ಅದಾನಿ ಅವರು ಫೆ.7ರಂದು ದಿವಾ ಶಾ ಅವರನ್ನು ವಿವಾಹವಾಗಲಿದ್ದಾರೆ. ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು ಉದಾತ್ತ ಪ್ರತಿಜ್ಞೆಯೊಂದಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಪ್ರತಿ ವರ್ಷ 500 ದಿವ್ಯಾಂಗ ಸಹೋದರಿಯರ ಮದುವೆಗೆ ತಲಾ 10 ಲಕ್ಷ ರೂ. ದೇಣಿಗೆ ನೀಡುವ ‘ಮಂಗಲ ಸೇವಾ’ ಪ್ರತಿಜ್ಞೆಯನ್ನು ಅವರು ತೆಗೆದುಕೊಂಡಿದ್ದಾರೆ. ಒಬ್ಬ ತಂದೆಯಾಗಿ ಈ ಪ್ರತಿಜ್ಞೆ ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ಇದರಿಂದ ಅನೇಕ ದಿವ್ಯಾಂಗ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳು ಸಂತೋಷ ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ಅದಾನಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
2019ರಲ್ಲಿ ಅದಾನಿ ಗ್ರೂಪ್ ಸೇರಿದ ಜೀತ್ ಅದಾನಿ, ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿ ಮಾಡುತ್ತಿರುವ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಮೂಲಸೌಕರ್ಯ ಕಂಪನಿಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ನಿರ್ದೇಶಕರಾಗಿದ್ದಾರೆ. ಪೆನ್ಸಿಲ್ವೇನಿಯಾ ವಿವಿಯ ಹಳೆಯ ವಿದ್ಯಾರ್ಥಿಯಾಗಿರುವ ಜೀತ್ ಅದಾನಿ ತಮ್ಮ ಒಡೆತನದ ರಕ್ಷಣಾ, ಪೆಟ್ರೋಕೆಮಿಕಲ್ಸ್ ಮತ್ತು ತಾಮ್ರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.