ಸಮಾನ ನಾಗರಿಕ ಸಂಹಿತೆ ಜಾರಿ ಪರ ಬ್ಯಾಟ್ ಬೀಸಿದ ವಿಪಕ್ಷದ ಪ್ರಮುಖ ನಾಯಕ
ಹೊಸದಿಲ್ಲಿ : ದೇಶದಲ್ಲಿ ಗೋಮಾಂಸ ಸೇವನೆ ಮಾತ್ರವಲ್ಲ ಎಲ್ಲ ರೀತಿಯ ಮಾಂಸಾಹಾರವನ್ನು ನಿಷೇಧಿಸಬೇಕು ಎನ್ನುವ ಮೂಲಕ ತೃಣಮೂಲ ಕಾಂಗ್ರೆಸ್ ಸಂಸದ, ಹಿರಿಯ ನಟ ಶತ್ರುಘ್ನ ಸಿನ್ಹ ಅಚ್ಚರಿ ಹುಟ್ಟಿಸಿದ್ದಾರೆ. ಅವರ ಪಕ್ಷ ಮತ್ತು ಅದರೊಂದಿಗಿರುವ ಇಂಡಿ ಮಿತ್ರಕೂಟದ ಎಲ್ಲ ಪಕ್ಷಗಳು ಗೋಮಾಂಸ ನಿಷೇಧವನ್ನೇ ವಿರೋಧಿಸುತ್ತಿರುವಾಗ ಸಿನ್ಹ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಇಷ್ಟು ಮಾತ್ರವಲ್ಲದೆ ಉತ್ತರಖಂಡದ ಬಿಜೆಪಿ ಸರಕಾರ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿರುವುದನ್ನೂ ಅವರು ಪ್ರಶಂಸಿಸಿದ್ದಾರೆ. ಇದು ಉತ್ತಮ ನಡೆಯಾಗಿದ್ದು, ದೇಶಾದ್ಯಂತ ಜಾರಿಯಾದರೆ ಒಳ್ಳೆಯದು. ಆದರೆ ಇಡೀ ದೇಶದಲ್ಲಿ ಜಾರಿ ಮಾಡುವುದು ಅಷ್ಟು ಸುಲಭವಲ್ಲ ಎಂದು ಸಿನ್ಹ ಅಭಿಪ್ರಾಯಪಟ್ಟಿದ್ದಾರೆ.
ಕೆಲವು ರಾಜ್ಯಗಳಲ್ಲಿ ಗೋಮಾಂಸಕ್ಕೆ ನಿಷೇಧವಿದೆ. ನನ್ನ ಅಭಿಪ್ರಾಯದ ಪ್ರಕಾರ ಗೋಮಾಂಸ ಮಾತ್ರವಲ್ಲ ದೇಶದಲ್ಲಿ ಮಾಂಸಾಹಾರ ಕೂಡ ನಿಷೇಧವಾಗಬೇಕು. ಆದರೆ ಕೆಲವು ರಾಜ್ಯಗಳಲ್ಲಿ ಗೋಮಾಂಸ ಪ್ರಮುಖ ಆಹಾರವಾಗಿರುವುದರಿಂದ ಎಲ್ಲೆಡೆ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ಕೆಲವೇ ರಾಜ್ಯಗಳಲ್ಲಿ ನಿಷೇಧ ಹೇರುವುದರಿಂದ ಪ್ರಯೋಜನವಿಲ್ಲ, ಇಡೀ ದೇಶದಲ್ಲಿ ನಿಷೇಧವಾಗಲಿ ಎಂದಿದ್ದಾರೆ.
ಸಮಾನ ನಾಗರಿಕ ಸಂಹಿತೆ ಜಾರಿ ದಿಟ್ಟ ನಡೆ. ಆದರೆ ಕೇಂದ್ರದ ಈ ಮಸೂದೆಯಲ್ಲಿ ಅನೇಕ ಲೋಪಗಳಿವೆ. ಎಲ್ಲರ ಅಭಿಪ್ರಾಯ ಆಲಿಸಿ ಇದನ್ನು ಜಾರಿಗೊಳಿಸಿದರೆ ಉತ್ತಮ ಎಂದು ಶತ್ರುಘ್ನ ಸಿನ್ಹ ಹೇಳಿದ್ದಾರೆ.