ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ

ಪುತ್ತೂರು: ಸರಕಾರಿ ಆಸ್ಪತ್ರೆಗೆ ಹೋದರೆ ಹೊಸ ರೋಗಗಳೇ ಬರಬಹುದು ಎನ್ನುವುದು ಸಾಮಾನ್ಯವಾಗಿ ಜನರು ಹೇಳುತ್ತಿದ್ದ ಮಾತಾಗಿತ್ತು. ಆದರೆ ಪುತ್ತೂರು ಸರಕಾರಿ ಆಸ್ಪತ್ರೆ ಈ ಮಾತಿಗೆ ಅಪವಾದವಾಗಿ ನಿಂತಿದೆ.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಶಿಫಾರಸ್ಸಿನ ಮೇಲೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯ 60 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದೆ. ಈ ಅನುದಾನದಲ್ಲಿ ಡಯಾಲಿಸೀಸ್ ಘಟಕವನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ್ದು, ಇಂದು ಸುವ್ಯವಸ್ಥಿತವಾಗಿ ಎದ್ದು ನಿಂತಿದೆ. ಇದೀಗ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಸೇವೆ ನೀಡುತ್ತಿದ್ದು, ಇನ್ನು 6 ಡಯಾಲಿಸೀಸ್ ಯಂತ್ರಗಳಿಗೆ ಕಾದು ನಿಂತಿದೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ಪ್ರವೇಶಿಸುತ್ತಿದ್ದಂತೆ, ಕಚೇರಿ ನಂತರ ಎದುರುಗೊಳ್ಳುವುದೇ ಡಯಾಲಿಸೀಸ್ ಘಟಕ. ಹಿಂದಿನ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಸೋರಿಕೆ ಸಮಸ್ಯೆಯೂ ಇತ್ತು. ಈ ಕಾರಣದಿಂದ ಡಯಾಲಿಸೀಸ್ ಘಟಕವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ್ದು, ಸುಧಾರಿತ ವ್ಯವಸ್ಥೆಗಳೊಂದಿಗೆ ಇಂದು ಕಾರ್ಯಾಚರಿಸುತ್ತಿದೆ.





























 
 

ಪುತ್ತೂರು ಸರಕಾರಿ ಆಸ್ಪತ್ರೆಯ ಕೊರತೆಗಳನ್ನು ಮನಗಂಡು, ಆರೋಗ್ಯ ರಕ್ಷಾ ಸಮಿತಿಯ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ 60 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದರು. ಈ ಅನುದಾನವನ್ನು ಬಳಸಿಕೊಂಡು, ಡಯಾಲಿಸೀಸ್ ಘಟಕವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು, ಸೋರುತ್ತಿದ್ದ ಆಸ್ಪತ್ರೆಯ ಕಚೇರಿಯನ್ನು ನವೀಕರಿಸಲಾಯಿತು, ಆಪರೇಷನ್ ಥಿಯೇಟರ್ ಅನ್ನು ನವೀಕರಿಸಿ ಪಾರ್ಟಿಷನ್ ಹಾಕಲಾಯಿತು, ಹೆರಿಗೆ ಕೊಠಡಿಯ ಸೋರಿಕೆಯನ್ನು ತಡೆಗಟ್ಟಿ ನವೀಕರಿಸಲಾಯಿತು, ಚುಚ್ಚುಮದ್ದಿನ ಕೊಠಡಿಗೆ ರೂಫಿಂಗ್, ಇಂಟರ್ ಲಾಕ್, ರೂಫಿಂಗ್ ಕೆಲಸವನ್ನು ಮಾಡಿಸಲಾಯಿತು, ಓಪಿಡಿಗೆ ರ್ಯಾಂಪ್, ಆಸ್ಪತ್ರೆ ಪ್ರವೇಶಿಸುವಲ್ಲಿ ಒಂದಷ್ಟು ಮಾರ್ಪಾಟು, ಶೌಚಾಲಯ ದುರಸ್ತಿ ಮೊದಲಾದ ಕಾರ್ಯಗಳನ್ನು ಮಾಡಲಾಯಿತು. ಮೊದಲು ಸಾರ್ವಜನಿಕರಿಗೆ ಹೊರಗಡೆ ಕುಳಿತುಕೊಳ್ಳಲು ವ್ಯವಸ್ಥೆ ಇರಲಿಲ್ಲ. ಇದರಿಂದ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತು. ಈಗ ಹೊರಗಡೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೀಗೆ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪುತ್ತೂರು ಸರಕಾರಿ ಆಸ್ಪತ್ರೆ ಹೊಸ ಲುಕ್‍ನಿಂದ ಆಕರ್ಷಿಸುತ್ತಿದೆ.

ಹೀಗಿವೆ ಡಯಾಲಿಸೀಸ್ ಯಂತ್ರಗಳು:

ಈಗಾಗಲೇ 6 ಡಯಾಲಿಸೀಸ್ ಯಂತ್ರಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿವೆ. ಇದರಲ್ಲಿ 2 ಸರಕಾರದ ಯಂತ್ರಗಳಾದರೆ, ಉಳಿದ 4 ಎಸ್ಕಾಗ್ ಸಂಜೀವಿನಿ ಕಂಪೆನಿಯದ್ದು. ಇನ್ನು 6 ಯಂತ್ರಗಳನ್ನು ರೋಟರಿ ಯುವ ಹಾಗೂ ಎಲೈಟ್ ನೀಡುವ ಭರವಸೆ ನೀಡಿದೆ. 1 ಯಂತ್ರವನ್ನು ಜೋಸ್ ಅಲುಕ್ಕಾಸ್ ನೀಡಲಿದೆ. ಹಾಗಾಗಿ ಇವಿಷ್ಟು ಯಂತ್ರಗಳಿಗೆ ಬೇಕಾಗುವಷ್ಟು ಸ್ಥಳಾವಕಾಶವನ್ನು ಗೊತ್ತು ಪಡಿಸಿಕೊಂಡೇ, ಹೊಸ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಇವಿಷ್ಟು ಯಂತ್ರಗಳು ಬಂದರೆ, 1 ಯಂತ್ರವನ್ನು ಹೆಚ್ಚುವರಿ ಯಂತ್ರವಾಗಿ ಉಳಿಸಿಕೊಳ್ಳಲಾಗುವುದು. ಉಳಿದ 12 ಯಂತ್ರಗಳು ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ.

ಇದೀಗ 1 ಯಂತ್ರ ದಿನಕ್ಕೆ 5 ರೋಗಿಗಳಿಗೆ ಡಯಾಲಿಸೀಸ್ ಮಾಡುತ್ತಿದೆ. ಅಂದರೆ 6 ಯಂತ್ರಗಳಲ್ಲಿ ದಿನಕ್ಕೆ 30 ಮಂದಿ ಡಯಲಿಸೀಸ್ ಪಡೆದುಕೊಳ್ಳುತ್ತಿದ್ದಾರೆ. ಹೊಸ ರೋಗಿಗಳು ಬಂದರೆ, ಅವರನ್ನು ವೈಟಿಂಗ್ ಲಿಸ್ಟ್‍ನಲ್ಲಿ ಇಡಲಾಗಿದೆ. ಹೊಸ ಯಂತ್ರಗಳು ಬಂದಾಕ್ಷಣ, ಅವರಿಗೂ ಡಯಲಿಸೀಸ್ ನೀಡಲಾಗುವುದು.

ಆರೋಗ್ಯ ರಕ್ಷಾ ಸಮಿತಿಯ ಬೆಂಬಲ, ಸಿಬ್ಬಂದಿಗಳ ಸಹಕಾರ:

ಶಾಸಕರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಬೆಂಬಲದಿಂದಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಸ್ಯೆಗಳು ಎದುರಾದಾಗ ಸಮಿತಿ ನಮ್ಮ ಬೆಂಬಲಕ್ಕೆ ನಿಂತಿದೆ. ಸಿಬ್ಬಂದಿಗಳು ಹೆಚ್ಚು ಸಹಕಾರ ನೀಡುತ್ತಿರುವುದರಿಂದ, ಆಸ್ಪತ್ರೆಯ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತಿವೆ. ಡಯಾಲಿಸೀಸ್ ಘಟಕಕ್ಕೂ ಪ್ರತ್ಯೇಕ ಕಟ್ಟಡವನ್ನು ನೀಡಿದ್ದು, ಕೋಲ್ಕತ್ತಾ ಮೂಲದ ಎಸ್ಕಾಗ್ ಸಂಜೀವಿನಿ ಕಂಪೆನಿ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ನೀರು, ವಿದ್ಯುತನ್ನು ಆಸ್ಪತ್ರೆಯಿಂದ ಪೂರೈಕೆ ಮಾಡಲಾಗುತ್ತಿದೆ. 2017ರಲ್ಲಿ ಹೆಸರು ನೋಂದಾಯಿಸಿದವರಿಗೂ ಈಗ ಡಯಾಲಿಸೀಸ್ ನಡೆಯುತ್ತಿದೆ. ಆದ್ದರಿಂದ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವವರು, ಆಸ್ಪತ್ರೆಗೆ ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಯಂತ್ರ ಖಾಲಿ ಇದ್ದ ಜಾಗಕ್ಕೆ ಅವರನ್ನು ಸೇರಿಸಿಕೊಳ್ಳಲಾಗುವುದು. ಇಲ್ಲದಿದ್ದರೆ ವೈಟಿಂಗ್ ಲಿಸ್ಟಿನಲ್ಲಿ ಹಾಕಲಾಗುವುದು.

ಡಾ. ಆಶಾ ಪುತ್ತೂರಾಯ, ವೈದ್ಯಾಧಿಕಾರಿ, ಪುತ್ತೂರು ಸರಕಾರಿ ಆಸ್ಪತ್ರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top