ಬೀಡಿ ಉದ್ಯಮಿ ಮನೆ ದರೋಡೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ತೀವ್ರ ಅಸ್ವಸ್ಥನಾದ ಆರೋಪಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಗಳೂರು: ವಿಟ್ಲದ ಬೋಳಂತೂರಿನ ಸಮೀಪ ನಾರ್ಶದ ಬೀಡಿ ಉದ್ಯಮಿ ಸುಲೈಮಾನ್‌ ಹಾಜಿ ಎಂಬವರ ಮನೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ತಂಡದ ಇನ್ನೋರ್ವ ಸದಸ್ಯನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕೇರಳ ಮೂಲದ ಸಚಿನ್‌ ಸೆರೆಯಾಗಿರುವ ಆರೋಪಿ. ಬಂಧನವಾದ ಬೆನ್ನಿಗೆ ತೀವ್ರ ಅಸ್ವಸ್ಥನಾದ ಅವನನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ. ಆರೋಪಿ ಅಪಸ್ಮಾರ ಮತ್ತು ತಲೆನೋವಿನಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಕೆಲದಿನಗಳ ಹಿಂದೆ ಕೇರಳದ ಕೊಟ್ಟಾಯಂನ ಅನಿಲ್‌ ಫೆರ್ನಾಂಡಿಸ್‌ ಎಂಬಾತನನ್ನು ಬಂಧಿಸಿ ಅವನಿಂದ ದರೋಡೆ ಬಳಸಿದ ಎರ್ಟಿಗಾ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದ ತನಿಖೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಅನೇಕ ಅನುಮಾನಗಳು ಸಾರ್ವಜನಿಕರ ಮನಸ್ಸಿನಲ್ಲಿ ಇವೆ. ಆರು ಮಂದಿಯ ತಂಡ ಈ ಕೃತ್ಯ ಎಸಗಿದ್ದು, ಇನ್ನೂ ನಾಲ್ಕು ಮಂದಿಯ ಬಂಧನವಾಗಬೇಕಾಗಿದೆ. ಡಿ.3ರಂದು ರಾತ್ರಿ ವಿಟ್ಲದ ಬಹಳ ಒಳಪ್ರದೇಶದಲ್ಲಿರುವ ಸುಲೈಮಾನ್‌ ಹಾಜಿಯವರ ಐಷರಾಮಿ ಬಂಗಲೆಗೆ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ತಂಡ ಅಕ್ರಮ ಆಸ್ತಿ ಸಂಪಾದಿಸಿದ ಕುರಿತು ಪರಿಶೋಧನೆ ಮಾಡಬೇಕಿದೆ ಎಂದು ಹೇಳಿ ರಡೂವರೆ ತಾಸು ಜಾಲಾಡಿತ್ತು.

































 
 

ವಂಚಕರು ಮನೆಯಿಂದ ಹೊರಡುವಾಗ, ‘ನಮ್ಮ ಜೊತೆ ಹಿಂದಿನಿಂದ ಬನ್ನಿ. ತನಿಖೆ ಪೂರ್ಣಗೊಂಡ ಬಳಿಕ ಮೊಬೈಲ್ ಹಿಂತಿರುಗಿಸುತ್ತೇವೆ’ ಎಂದು ಹೇಳಿದ್ದಾರೆ. ಮಾತು ನಂಬಿದ ಉದ್ಯಮಿ ಕಾರಿನಲ್ಲಿ ಹಾಗೂ ಅವರ ಪುತ್ರ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕದ ಕಡೆಗೆ ಕಾರು ಸಂಚರಿಸಿದೆ. ಬೋಳಂತೂರು ಸಮೀಪಿಸುತ್ತಿದ್ದಂತೆ ಹಿಂಬಾಲಿಸಲು ಸಾಧ್ಯವಾಗದಷ್ಟು ವೇಗವಾಗಿ ವಂಚಕರ ಕಾರು ಮುಂದೆ ಸಾಗಿದೆ. ಕಾರು ಕಾಣದೇ ಇದ್ದಾಗ ಉದ್ಯಮಿ ಪುತ್ರ ಕರೆ ಮಾಡಿದ್ದಾರೆ. ಆಗ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಆಗ ಏನೋ ಮೋಸ ನಡೆದಿರುವುದು ಅರಿವಿಗೆ ಬಂದಿದೆ. ಬಳಿಕ ನಕಲಿ ಇ.ಡಿ.ಅಧಿಕಾರಿಗಳ ಕೃತ್ಯ ಎಂದು ಗೊತ್ತಾಗಿತ್ತು. ಪ್ರಕರಣ ನಡೆದು ಎರಡು ತಿಂಗಳು ಕಳೆದರೂ ಇನ್ನೂ ಎಲ್ಲ ಆರೋಪಿಗಳ ಬಂಧನವಾಗಿಲ್ಲ. ಅದರ ಬಳಿಕ ಕಳೆದ ಜನವರಿಯಲ್ಲಿ ನಡೆದ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣವನ್ನು ಪೊಲೀಸರು ನಾಲ್ಕೇ ದಿನದಲ್ಲಿ ಭೇದಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ನಾರ್ಶದ ದರೋಡೆ ಪ್ರಕರಣ ಇಷ್ಟು ಜಟಿವಾದದ್ದೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top