ಶೇ.10 ಕೃಪಾಂಕ ಇಲ್ಲ; ಫಲಿತಾಂಶ ಸುಧಾರಣೆಗೆ ನಾನಾ ಕಸರತ್ತು
ಬೆಂಗಳೂರು : ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ನಿಯಮ ತರಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ವೆಬ್ಕಾಸ್ಟಿಂಗ್ ಹಾಗೂ ಸಿಸಿಟಿವಿ ನಿಯಮ ಮತ್ತಷ್ಟು ಕಠಿಣವಾಗಲಿದೆ. ಜೊತೆಗೆ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೃಪಾಂಕ ಕೊಡದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿನ್ನೆ ಎಸ್ಎಸ್ಎಲ್ಸಿ ಮಕ್ಕಳ ಹಾಗೂ ಶಿಕ್ಷಕರ ಜೊತೆ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಬಳಿಕ ಈ ವರ್ಷ ಕೃಪಾಂಕ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಗ್ರೇಸ್ ಮಾರ್ಕ್ ಕೊಟ್ಟು ತೇರ್ಗಡೆ ಪ್ರಮಾಣ ಹೆಚ್ಚಿಸಿ ಶಿಕ್ಷಣ ಇಲಾಖೆ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೂ ಮುನ್ನವೇ ಶಿಕ್ಷಣ ಸಚಿವರು ಗ್ರೇಸ್ ಮಾರ್ಕ್ ಸಿಗುವುದಿಲ್ಲ ಹಾಗೂ ಪರೀಕ್ಷೆ ನಿಯಮಗಳು ಕಠಿಣವಾಗಿರುತ್ತವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ವೆಬ್ಕಾಸ್ಟ್ ಮಾಡಿದ ಪರಿಣಾಮ ಕಡಿಮೆ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಎಂದು ಚಿಂತನೆ ಮಾಡಿದ್ದೇವೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನ ಸಿದ್ಧ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಜಾಸ್ತಿ ಆಗಲಿದೆ. ಮಕ್ಕಳಿಗೆ ಒತ್ತಡ ಹಾಕಬಾರದು ಅಂತ ಸೂಚನೆ ನೀಡಿದ್ದೇನೆ. ಕಳೆದ ವರ್ಷ ಗ್ರೇಸ್ ಮಾರ್ಕ್ ಕೊಟ್ಟದ್ದಕ್ಕೆ ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದರು. ಈ ರೀತಿ ಮಕ್ಕಳನ್ನು ತೇರ್ಗಡೆ ಮಾಡುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ಕೊಡುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೊಟ್ಟಿದ್ದ ಶೇ.10 ಗ್ರೇಸ್ ಅಂಕದ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಆದರೆ ನಾವು ಕಳೆದ ಬಾರಿ ವೆಬ್ಕಾಸ್ಟಿಂಗ್ ಹಿನ್ನೆಲೆಯಲ್ಲಿ ಕೊಟ್ಟಿದ್ದ ಶೇ.10 ಗ್ರೇಸ್ ಅಂಕ ಈ ಬಾರಿ ನೀಡಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗೆ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಒಂದು ದಿನಕ್ಕೆ ಒಂದು ಅಂಕ ಎಂಬ ಕಾರ್ಯಕ್ರಮ ಶುರು ಮಾಡಿದೆ. ಮಕ್ಕಳಿಗೆ ಬೆಳಗ್ಗೆ ಫೋನ್ ಮಾಡಿ ಎಬ್ಬಿಸಿ ಓದಿಸುವ ಕಾರ್ಯಕ್ರಮ. ವಿಶೇಷ ತರಗತಿಗಳನ್ನು ಮಾಡುವ ಮೂಲಕ ಅಭ್ಯಾಸ ಮಾಡುವ ಕಾರ್ಯಕ್ರಮ ಮಾಡಲಾಗುತ್ತಿದೆ. ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು ಮಾಡಲಾಗಿದೆ. ಸಿಇಒಗಳೇ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿ ಪರೀಕ್ಷೆ ಮಾಡಿದ್ದಾರೆ. 2-3 ಶಾಲೆಗಳಿಗೆ ಒಬ್ಬ ಅಧಿಕಾರಿ ನೇಮಕ ಮಾಡಿ ಕಲಿಕೆ ಸುಧಾರಿಸುವ ಮಾಡುವ ಕೆಲಸ ಮಾಡಿದ್ದೇವೆ. ಗ್ರೂಪ್ ಸ್ಟಡಿ ಮಾಡುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕಳೆದ ಬಾರಿ ಶೇ.10 ಕೃಪಾಂಕ ಶಿಕ್ಷಣ ಇಲಾಖೆ ಕೊಟ್ಟಿತ್ತು. ಕೋವಿಡ್ ಹಿನ್ನೆಲೆ ಮೊದಲೇ ಶೇ.10 ಕೃಪಾಂಕ ಇತ್ತು. ಒಟ್ಟು ಶೇ.20 ಕೃಪಾಂಕ ಕೊಟ್ಟಿದ್ದು ಬಾರಿ ವಿವಾದ ಆಗಿತ್ತು.