ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 ಭಾನುವಾರ ಸಂಜೆ ಸಂಪನ್ನಗೊಂಡಿತು.
ಪ್ರತೀ ವಲಯದವರು ಸಂಘಟನೆ ಬೆಳೆಸಬೇಕು : ಅಮರನಾಥ ಗೌಡ
ಸಮಾರಂಭವನ್ನುದ್ದೇಶಿಸಿ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಮಾತನಾಡಿ, ಈ ಹಿಂದೆ ಎರಡು ಕ್ರೀಡಾಕೂಟದ ಜವಾಬ್ದಾರಿ ವಹಿಸಿಕೊಂಡಿದ್ದೆ. ಇದೀಗ ಮೂರನೇ ಕ್ರೀಡಾಕೂಟ. ಎಲ್ಲಾ ಕ್ರೀಡಾಕೂಟ ಯಶಸ್ವಿಯಾಗಿದೆ. ಕ್ರೀಡಾಕೂಟಕ್ಕೆ ಪ್ರತೀ ಗ್ರಾಮದವರು ಸಹಕಾರ ನೀಡಿದ್ದಾರೆ. ಈ ವಲಯದವರು ಒಳ್ಳೆಯ ಸಂಘಟನೆಯನ್ನು ಕಟ್ಟಿದ್ದಾರೆ. ಇದು ಸಮಾಜಕ್ಕೆ ಆಸ್ತಿ. ಪ್ರತೀ ವಲಯದವರೂ ಈ ರೀತಿ ಸಂಘಟನೆ ಬೆಳೆಸಬೇಕು. ಇಂದು ನಡೆದ ಕ್ರೀಡಾ ಸಂಭ್ರಮ ಎಲ್ಲರಿಗೂ ಸಂಭ್ರಮ ತಂದಿದೆ. ಇದಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕ್ರೀಡೆ ಸಂಘಟನೆಯಲ್ಲಿ ಪ್ರೀತಿ-ವಿಶ್ವಾಸ ಮೂಡಿಸಲು ಸಹಕಾರಿಯಾಗಿದೆ : ಪುರುಷೋತ್ತಮ ಮುಂಗ್ಲಿಮನೆ
ಒಕ್ಕಲಿಗ ಗೌಡ ಸಂಘದ ಗೌರವ ಸಲಹೆಗಾರ ಪುರುಷೋತ್ತಮ ಮುಂಗ್ಲಿಮನೆ ಮಾತನಾಡಿ, ಎರಡು ವರ್ಷಗಳ ಹಿಂದೆ ಆರಂಭಿಸಿದ ಕ್ರೀಡಾ ಸಂಭ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ರೀತಿ ಯುವ ಸಂಘ ಬೆಳೆದು ಬಂದಿದೆ. ಕ್ರೀಡೆ ಕೇವಲ ಪ್ರಶಸ್ತಿಗೆ ಮಾತ್ರ ಸೀಮಿತವಾಗಿರಬಾರದು. ಕ್ರೀಡೆ ಸಂಘಟನೆಯಲ್ಲಿ ಪ್ರೀತಿ ವಿಶ್ವಾಸ ಮೂಡಿಸಲೂ ಸಹಕಾರಿಯಾಗಿದೆ. ಪ್ರತಿಭೆಗಳಿಗೆ ವೇದಿಕೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟ ನಡೆಸಲಾಗಿದೆ ಎಂದರು.
ಯುವ ಪೀಳಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು : ಸುಂದರ ಗೌಡ ನಡುಬೈಲು
ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಗೌಡ ನಡುಬೈಲು ಮಾತನಾಡಿ, ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ಮೂಲಕ ಸಂಘನೆಯನ್ನು ಬೆಳೆಸಬೇಕು ಎಂಬುದೇ ಕ್ರೀಡಾ ಸಂಭ್ರಮದ ಮುಖ್ಯ ಉದ್ದೇಶವಾಗಬೇಕು ಎಂದರು.
ಸಮಾಜದ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು : ನಾಗೇಶ್ ಕೆಡೆಂಜಿ
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ, ಪ್ರೇರಣಾ ಸಂಸ್ಥೆಯ ನಿರ್ದೇಶಕ ನಾಗೇಶ್‍ಕೆಡೆಂಜಿ, ಕ್ರೀಡಾ ಸಂಭ್ರಮ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಇಂತಹಾ ಕಾರ್ಯಕ್ರಮದ ಜತೆಗೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದ ಅವರು, ಹಿರಿಯರಿಂದ ಪಡೆದುಕೊಂಡದ್ದನ್ನು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಸಮಾಜದ ಯುವಕ-ಯುವತಿಯರು ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಮಾಜ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆ ಸಂಘರ್ಷಕ್ಕಲ್ಲ-ಸಾಮರಸ್ಯಕ್ಕೆ : ರಾಧಾಕೃಷ್ಣ ನಂದಿಲ
ದ.ಕ., ಕೊಡಗು ಗೌಡ ಅಭಿವೃದ್ಧಿ ಸಂಘದ ನಿರ್ದೇಶಕ, ಉದ್ಯಮಿ ರಾಧಾಕೃಷ್ಣ ನಂದಿಲ ಮಾತನಾಡಿ, ಕ್ರೀಡೆ ಸಂಘರ್ಷಕ್ಕಲ್ಲ, ಸಾಮರಸ್ಯಕ್ಕೆ ಇರುವುದು. ಇಂದಿನ ಕ್ರೀಡಾ ಸಂಭ್ರಮ ಇಷ್ಟೊಂದು ಯಶಸ್ವಿಯಾಗಿ ನಡೆದುಕೊಂಡು ಬಂದಿವುದಕ್ಕೆ ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡರ ನೇತೃತ್ವ ಕಾರಣವಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದ ಎಲ್ಲರೂ ಒಂದಾಗುವುದಕ್ಕೆ ಕ್ರೀಡಾ ಸಂಭ್ರಮ : ಚೆನ್ನಪ್ಪ ಗೌಡ ಕೋಲಾಡಿ
ಮುಂಡೂರು ವಲಯ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ ಮಾತನಾಡಿ, ಎಲ್ಲರನ್ನೂ ಸೇರಿಸಿಕೊಂಡು ಉತ್ತಮ ಉದ್ದೇಶದೊಂದಿಗೆ ನಾವೆಲ್ಲರೂ ಒಂದಾಗಬೇಕು, ಸಂಭ್ರಮ ಪಡೆಯಬೇಕು, ಯುವ ಪೀಳಿಗೆಗೆ ಒಂದಷ್ಟು ಸಂದೇಶ ಹೋಗಬೇಕು ಎಂಬ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಿದ್ದೇವೆ. ಯಶಸ್ವಿಯಾಗಿ ನಡೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾಜದ ಹಲವಾರು ಜನರನ್ನು ಸೇರಿಸಿಕೊಂಡು ನಡೆಸಿದ ಕ್ರೀಡಾಕೂಟ ಮೆಚ್ಚುಗೆಗೆ ಪಾತ್ರವಾಗಿದೆ : ಗೋಪಾಲಕೃಷ್ಣ ಪಟೇಲ್ ಚಾರ್ವಾಕ
ಒಕ್ಕಲಿಗ ಸ್ವಸಹಾಯಾ ಟ್ರಸ್ಟ್ ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಸಮಾಜದ ವತಿಯಿಂದ ನಡೆಯುತ್ತಿರುವ ಈ ಕ್ರೀಡಾ ಸಂಭ್ರಮ ನೋಡುವುದಕ್ಕೆ ಹೆಮ್ಮೆಯಾಗುತ್ತಿದೆ. ಸಮಾಜದ ಇಷ್ಟೊಂದು ಜನರನ್ನು ಸೇರಿಸಿಕೊಂಡು ಯಶಸ್ವಿಯಾಗಿ ಕ್ರೀಡಾಕೂಟ ನಡೆಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿಮುಂಗ್ಲಿಮನೆ, ಉದ್ಯಮಿ ಮಂಜುನಾಥ ಗೌಡ ಬನ್ನೂರು, ಕ್ರೀಡಾಕೂಟ ಸಹಸಂಚಾಲಕ ಸುರೇಶ್‍ಗೌಡ ಉಪಸ್ಥಿತರಿದ್ದರು.
ಮುಂಡೂರು ವಲಯದ ಗೌರವಾಧ್ಯಕ್ಷ ಮೋಹನ ಗೌಡ ಪಾದೆ ಸ್ವಾಗತಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.