ಶಾಸಕರು ಸೇರಿ ಕೆಲವು ಪ್ರಭಾವಿಗಳ ಕೈವಾಡವಿರುವ ಆರೋಪ
ಬೆಂಗಳೂರು: ಕಳೆದ ವರ್ಷ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹತ್ಯೆ ನಡೆದು ಒಂಬತ್ತು ತಿಂಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿರುವ ನೇಹಾಳ ತಂದೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನೇಹಾಳ ಹಂತಕನಿಗೆ ಇನ್ನೂ ಶಿಕ್ಷೆಯಾಗಿಲ್ಲ. 4 ತಿಂಗಳಲ್ಲಿ ನೇಹಾಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ ನ್ಯಾಯ ದೊರೆತಿಲ್ಲ. ನೇಹಾ ಕೊಲೆ ಹಿಂದೆ ಶಾಸಕರ ಕೈವಾಡವಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನೇಹಾಳ ತಂದೆ ಕಾಂಗ್ರೆಸ್ ನಾಯಕ ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.
2024ರ ಎಪ್ರಿಲ್ 18ರಂದು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್‌ನ ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಫಯಾಜ್ ಎಂಬಾತ ಹಾಡಹಗಲೇ ಎಲ್ಲರೆದುರೇ ಚಾಕುವಿನಿಂದ ನೇಹಾಳನ್ನು ಚುಚ್ಚಿ ಚುಚ್ಚಿ ಕೊಲೆಮಾಡಿದ ಕೃತ್ಯ ಸಿಸಿಟಿವಿಯ ದೃಶ್ಯ ವೈರಲ್ ಆಗಿ ಬೆಚ್ಚಿ ಬೀಳಿಸಿತ್ತು. ಫಯಾಜ್ನನ್ನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂಧಿಸಿದ್ದರು.
ಈ ಕೊಲೆ ಪ್ರಕರಣ ಸರ್ಕಾರಕ್ಕೆ ದೊಡ್ಡಮಟ್ಟದ ಇರಿಸುಮುರಿಸು ಉಂಟುಮಾಡಿತ್ತು. ನೇಹಾಳ ಕೊಲೆ ಖಂಡಿಸಿ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದವು. ನಿರಂಜನ್ ಹಿರೇಮಠ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದರು. ಬಳಿಕ ಸರ್ಕಾರ ನೇಹಾಳ ಕೊಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು. ಪಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ 120 ದಿನಗಳಲ್ಲಿಯೇ ನೇಹಾಳ ಸಾವಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ ಮತ್ತು ಪಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪನೆಯಾಗಿಲ್ಲ. ಹೀಗಾಗಿ ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.
ಕೆಲದಿನಗಳ ಹಿಂದೆ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ನೇಹಾ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಶ್ರೀರಾಮಸೇನೆ ಬೆನ್ನಲ್ಲೇ ನೇಹಾ ತಂದೆಯಿಂದಲೂ ಸಿಬಿಐ ತನಿಖೆಗೆ ಆಗ್ರಹ ಕೇಳಿ ಬಂದಿದೆ. ಮಗಳ ಹತ್ಯೆ ನಡೆದು 9 ತಿಂಗಳು ಕಳೆದರೂ ನ್ಯಾಯ ಸಿಗುತ್ತಿಲ್ಲ. ಈ ತನಿಖೆಯ ಹಾದಿ ಎತ್ತ ಸಾಗುತ್ತಿದೆಎಂದು ಗೊತ್ತಾಗುತ್ತಿಲ್ಲ. ಈ ಪ್ರಕರಣದ ತನಿಖೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆ ಮೂಡಿಸಿದೆ. ಆದ್ದರಿಂದ ಸಿಬಿಐ ತನಿಖೆ ಆಗಲಿ. ಕೊಲೆ ಕೇಸ್ನಲ್ಲಿ ಶಾಸಕರ ಕೈವಾಡ ಇರುವುದು ಸತ್ಯ ಎಂದು ಹಿರೇಮಠ ಆರೋಪಿಸಿದ್ದಾರೆ.
ಮತ್ತೊಂದು ಕಡೆ ನೇಹಾ ಕೊಲೆ ಕೇಸ್ ವಿಚಾರವಾಗಿ ಶ್ರೀರಾಮಸೇನೆ ಹೋರಾಟದ ಹಾದಿ ಹಿಡಿದಿದೆ. ಈಗಾಗಲೇ ಹಂತಕ ಫಯಾಜ್ ವ್ಯಾಸಂಗ ಮಾಡತಿದ್ದ ಕಾಲೇಜ್ಗೆ ಭೇಟಿ ನೀಡಿ ಶಾಶ್ವತವಾಗಿ ಫಯಾಜ್ ನನ್ನ ಸಸ್ಪೆಂಡ್ ಮಾಡಿಸುವಲ್ಲಿ ಮುತಾಲಿಕ್ ಯಶಸ್ವಿಯಾಗಿದ್ದಾರೆ. ನೇಹಾ ಹತ್ಯೆಯಲ್ಲಿ ಕೆಲ ಪ್ರಭಾವಿಗಳು, ಶಾಸಕರು ಕೈವಾಡವಿರುವ ಬಗ್ಗೆ ನನ್ನ ಬಳಿ ಸಾಕ್ಷಿ ಇವೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.