ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದ ಪಾಟೀಲ್
ಬೆಂಗಳೂರು: ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಹುದ್ದೆಗೆ ನಿನ್ನೆ ದಿಢೀರ್ ಎಂದು ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ್ದ ಶಾಸಕ ಬಿ.ಆರ್. ಪಾಟೀಲ್ ಇಂದು ತನ್ನ ನಡೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಮದವರ ಜೊತೆ ಮಾತನಾಡಿದ ಪಾಟೀಲ್ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟಿಲ್ಲ. ಕೆಲವು ಸಮಸ್ಯೆಗಳಿವೆ ಎಂದು ನೇರವಾಗಿ ವಾಗ್ದಾಳಿ ತನ್ನ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸ್ಥಾನಕ್ಕೆ ನಾನು ರಾಜಿನಾಮೆ ನೀಡಿದ್ದು ವಿಶೇಷ ಬೆಳವಣಿಗೆಯಲ್ಲ. ಯಾವುತ್ತೋ ರಾಜೀನಾಮೆ ನೀಡಬೇಕಿತ್ತು. ನಿನ್ನೆ ರಾಜೀನಾಮೆ ನೀಡಿದ್ದೇನೆ ಎಂದರು.
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡನೇ ಬಾರಿಗೆ ಪತ್ರ ಬರೆದಿದ್ದೇನೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಒತ್ತಡದಲ್ಲಿದ್ದಾರೆ. ಆದರೆ ನಾನು ಕೊನೇವರೆಗೂ ಅವರ ಸ್ನೇಹಿತನಾಗಿ ಉಳಿಯುತ್ತೇನೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ. ಹಾಗೆಂದು ನನಗೆ ಯಾವುದೇ ಅಸಮಾಧಾನ ಇಲ್ಲ. ಪತ್ರದಲ್ಲಿ ಸಿದ್ದರಾಮಯ್ಯಗೆ ಎಲ್ಲವನ್ನೂ ನಾನು ತಿಳಿಸಿದ್ದೇನೆ. ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
ಬಿ.ಆರ್ ಪಾಟೀಲ್ ದಿಡೀರ್ ರಾಜೀನಾಮೆ ನಿರ್ಧಾರ ಅಚ್ಚರಿಗೆ ಕಾರಣವಾಗಿ ನಾನಾ ರೀತಿಯ ಊಹಾಪೋಹಗಳು ರಾಜಕಕೀಯ ಪಡಸಾಲೆಯಲ್ಲಿ ಹರಡಿದ್ದವು. ಇದಕ್ಕೂ ಮಿಗಿಲಾಗಿ ಗ್ಯಾರಂಟಿಗಳಿಂದಾಗಿ ರಾಜ್ಯ ದಿವಾಳಿಯಾಗಿದೆ ಎಂದು ಆರೋಪಿಸುತ್ತಿರುವ ವಿಪಕ್ಷಗಳಿಗೆ ಸರಕಾರದ ಮೇಲೆ ದಾಳಿ ಮಾಡಲು ಅತ್ಯುತ್ತಮ ಅಸ್ತ್ರ ಸಿಕ್ಕಿತ್ತು.
ಬಿ.ಆರ್ ಪಾಟೀಲ್ ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದರು. ಸಚಿವ ಸ್ಥಾನ ಸಿಗದೆ ಇರುವ ಕಾರಣಕ್ಕಾಗಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಬಜೆಟ್ನಲ್ಲಿ ಆಳಂದ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಇರುವುದಕ್ಕೆ ಬೇಸರಗೊಂಡಿದ್ದರು. ಈ ಬಾರಿ ರಾಜೀನಾಮೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.