ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ!

ಬೆಂಗಳೂರು : ಈ ಸಲದ ವಿಧಾನಸಭೆ ಚುನಾವಣೆ ಹಲವು ಹಿರಿಯ ನಾಯಕರ ಪಾಲಿಗೆ ಕೊನೇ ಚುನಾವಣೆ ಆಗಲಿದೆ. ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕೂಡ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಈ ಸಲ ಸ್ಪರ್ಧಿಸುತ್ತಿದ್ದೇನೆ. ಇನ್ನು ಚುನಾವಣೆ ಕಣಕ್ಕಿಳಿಯುವುದಿಲ್ಲ ಎನ್ನುತ್ತಿದ್ದಾರೆ. ಇದರ ಬೆನ್ನಿಗೆ ಇದೀಗ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರೂ ಇದೇ ನನ್ನ ಕೊನೇ ಚುನಾವಣೆ ಎಂಭ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ.
“ನಾನು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಏಕೆಂದರೆ ನಾನು ರಾಜಕೀಯದಿಂದ ದಣಿದಿದ್ದೇನೆ. ನನಗೆ ವಿಶ್ರಾಂತಿಯ ಅಗತ್ಯವಿದೆ. ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುತ್ತೇನೆ” ಎಂದು ಮಾಜಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಸಕ್ರಿಯ ರಾಜಕಾರಣವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
2018ರಲ್ಲಿ, ಎಚ್.ಡಿ. ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಉಪಚುನಾವಣೆಯಲ್ಲಿ ತನ್ನ ಸ್ಥಾನವನ್ನು ಪತ್ನಿ ಅನಿತಾ ಕುಮಾರಸ್ವಾಮಿಗಾಗಿ ಹಿಂದಿನ ಕ್ಷೇತ್ರವನ್ನು ತೊರೆದಿದ್ದರು. ಮುಂಬರುವ ಚುನಾವಣೆಯಲ್ಲಿ ಅವರ ಮಗ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅಂದರೆ ತಂದೆ ಮತ್ತು ಮಗ ಇಬ್ಬರೂ ಪರಸ್ಪರ ಅಕ್ಕಪಕ್ಕದ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಪದೇ ಪದೆ ಮಾಹಿತಿ ನೀಡುವ ಅವರು, “ನಾನು ಈಗಾಗಲೇ ರಾಜ್ಯಾದ್ಯಂತ ಒಂಟಿಯಾಗಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ನನಗೂ ಎರಡು ಬಾರಿ ಆಪರೇಷನ್ ಆಗಿದೆ. ನಾನು ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ನಾವು ಅಭ್ಯರ್ಥಿಯನ್ನ ಘೋಷಣೆ ಮಾಡುವವರೆಗೂ ಕಾರ್ಯಕರ್ತರು ಧೃತಿಗೆಡಬಾರದು” ಎಂದು ಹಾಸನದ ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ್ದಾರೆ.
63 ವರ್ಷ ವಯಸ್ಸಿನ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಹೌದು. 2023ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಅಧಿಕಾರಕ್ಕೆ ತಂದೆ ತರುತ್ತೇನೆ ಎಂಬ ಭರವಸೆಯಲ್ಲಿ ‘ಪಂಚರತ್ನ ರಥಯಾತ್ರೆ’ ಅಭಿಯಾನದ ಮೂಲಕ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top