ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ | ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿ

ಪುತ್ತೂರು : ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪುನರ್‍ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರಗಿದವು.

ಬೆಳಗ್ಗೆ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ತತ್ವಕಲಶ, ತತ್ವಹೋಮ, ಅನುಜ್ಞಾ ಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲಪೂಜೆ, ಮಧ್ಯಾಹ್ನ 12 ಕ್ಕೆ ಅಂಕುರ ಪೂಜೆ, ತ್ರಿಕಾಲಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಬೆಳಿಗ್ಗೆ 10 ಗಂಟೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರಸ್ತುತ ಕಲಿಯುಗದಲ್ಲಿ ಭಕ್ತರ ಭಕ್ತಿಯೊಂದಿಗೆ ದೈವೀ ಶಕ್ತಿ ಜಾಸ್ತಿಯಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಶ್ರೀ ಸಾಮಾನ್ಯನಿಗೂ ಹಣ  ನೀಡುವ ಶಕ್ತಿ ತುಂಬಿದೆ. ಜನರಿಗೆ ಆರೋಗ್ಯ, ನೆಮ್ಮದಿ ಬೇಕಾದರೆ ಭಗವಂತನ ಮೊರೆ ಹೋಗುವುದು ಸಾಮಾನ್ಯ. ಮನುಷ್ಯ ಶಕ್ತಿಗಿಂತ ದೊಡ್ಡದಾದ ದೈವಶಕ್ತಿ ಇದೆ ಎಂಬುದನ್ನು ನಂಬಬೇಕಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡರೆ ಆರೋಗ್ಯ-ನೆಮ್ಮದಿ ದೊರೆಯುತ್ತದೆ ಎಂದರು.



































 
 

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನ ಸೃಷ್ಟಿ ಅದ್ಭುತವಾಗಿದ್ದು, ಮನುಷ್ಯನಿಗೆ ಆಲೋಚನಾ ಶಕ್ತಿ ಜತೆಗೆ ಹೆಚ್ಚಿನ ಜವಾಬ್ದಾರಿ ಭಗವಂತನು ನೀಡಿದ ವಿಶೇಷ ಶಕ್ತಿಯಾಗಿದೆ. ಅದನ್ನು ಜೀವನದಲ್ಲಿ ಸಾರ್ಥಕಗೊಳಿಸುವುದು ಮುಖ್ಯ. ಆಧ್ಯಾತ್ಮಿಕವಾಗಿ ಎತ್ತರಕ್ಕೆ ಏರಲು ಭಗವಂತನ ನಾಮಸ್ಮರಣೆ ಅತೀ ಮುಖ್ಯವಾಗಿದ್ದು, ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಿಂದ ಇದು ಸಾಧ್ಯ ಎಂದು ನುಡಿದರು

ಪುತ್ತೂರು ಶಾಸಕ ಸಂಜೀವ ಮಠಂದೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸಮಾಜ ಜಾಗೃತಿ ಸಮಾಜವಾಗುವುದರ ಜತೆಗೆ ಭಜನೆ, ದೇವತಾರಾಧನೆ, ಆಧ್ಯಾತ್ಮಿಕ ಶ್ರದ್ಧೆ ಎಲ್ಲವನ್ನು ಸೇರಿಸಿ ಭಗವಂತನ ದೇಗುಲ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯವಿದೆ. ಈ ಕೆಲಸ ತನು-ಮನ-ಧನದೊಂದಿಗೆ ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಆಗಿದೆ. ಈ ಮೂಲಕ ದೇವಾಲಯ ನಿರ್ಮಾಣದಲ್ಲಿ ಇತಿಹಾಸ ಸೃಷ್ಟಿಸಿದೆ. ಮುಂದಿನ 500 ವರ್ಷಗಳು ಕಳೆದರೂ ದೇವಾಲಯವನ್ನು ಇತಿಹಾಸವನ್ನು ತಲುಪಿಸುವ ಕೆಲಸ ಆಗುವುದರ ಜತೆಗೆ ಆಧ್ಯಾತ್ಮ ಜಗತ್ತಿಗೆ ಕೊಡುಗೆಯೂ ಆಗಿದೆ ಎಂದರು.

ಶ್ರೀ ಕ್ಷೇತ್ರ ಮಲ್ಲದ ಅನುವಂಶಿಕ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್‍ ಮಾತನಾಡಿ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಕೇವಲ ಒಂದೇ ವರ್ಷದಲ್ಲಿ ಜೀರ್ಣೋದ್ಧಾರಗೊಂಡಿದೆ ಎಂದರೆ ದೇವರ ಅನುಗ್ರಹ ಸಂಪೂರ್ಣ ಸಿಕ್ಕಿದೆ. ಈ ಮೂಲಕ ಊರಿನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಪವಿತ್ರಪಾಣಿ ಕೇಶವ ಭಟ್ ಕೂವೆತ್ತೋಟ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್‍ ರೈ ಪೇರಾಲು, ಲಕ್ಷ್ಮೀನಾರಾಯಣ ರಾವ್ ಪಡುಮಲೆ, ತಿಲೋತ್ತಮ ಎಸ್.ರೈ, ಮನೋಹರ ಪ್ರಸಾದ್ ರೈ, ವಿಶಾಲಾಕ್ಷಿ ನೂಚಿಲೋಡ್, ನಾರಾಯಣ ಭಟ್ ಪಟ್ಟೆ, ನಾಗೇಶ್‍ ಭಟ್ ಪಾದೆಕರ್ಯ, ವಿಷ್ಣು ಭಟ್ ಕನ್ನಡ್ಕ, ಉಲ್ಲಾಸ್ ಪಡ್ಪು, ಚಿತ್ರನಟ ಸುರೇಶ್‍ ರೈ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಲರಾಮ ಶೆಟ್ಟಿ ನಿಟ್ಟೆಗುತ್ತು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇಣುಗೋಪಾಲ ದಂಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಗೌರವಿಸಿದರು. ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿದರು. ವಿಷ್ಣುಭಟ್ ಅವರನ್ನು ಸದಾನಂದ ಭಟ್ ಗೌರವಿಸಡಿದರು. ಗಣಪತಿ ಭಟ್, ಮಹೇಶ್‍ ಭಟ್‍ ಪ್ರಾರ್ಥನೆ ಹಾಡಿದರು. ವೇದಿಕೆ ನಿರ್ವಹಣಾ ಸಮಿತಿ ಸಂಚಾಲಕ ಶಿವಶಂಖರ ಭಟ್‍ ಕನ್ನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲ ಕಲಶ ಹೊತ್ತ ಮಹಿಳೆಯರಿಂದ ಚೆಂಡೆ, ವಾದ್ಯ. ಕೊಂಬು ಕಹಳೆಯೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ 2 ರಿಂದ ತೆಂಕು ಹಾಗೂ ಬಡಗಿನ ಖ್ಯಾತ ಕಲಾವಿದರಿಂದ ಯಕ್ಷಗಾನ ನಾಟ್ಯ – ಹಾಸ್ಯ ವೈಭವ ನಡೆಯಿತು. ಸಂಜೆ 6 ಕ್ಕೆ ಆರ್ಲಪದವು ಬಳಗದವರಿಂದ ಸುಗಮ ಸಂಗೀತ, 8 ರಿಂದ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಮದ ಭಕ್ತಿ ರಸಮಂಜರಿ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top