ಅನಂತ್‌ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ : ಕನ್ನಡಿಗರಿಗೆ ಪುಳಕ

ನೀವೇ ನನ್ನ ಸ್ಫೂರ್ತಿ ಎಂದು ಅಭಿನಂದಿಸಿದ ರಿಷಬ್‌ ಶೆಟ್ಟಿ

ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳಿಂದ ತೊಡಗಿಸಿಕೊಂಡಿರುವ ಅನಂತ್‌ ನಾಗ್‌ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಕನ್ನಡವಲ್ಲದೆ ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮುಂಬಯಿಯ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್‌ ನಾಗ್‌ ಸಹಜ ಅಭಿನಯಕ್ಕೆ ಖ್ಯಾತರಾದವರು. ಅವರ ಪ್ರತಿಭೆ ಮತ್ತು ಸಾಧನೆಗೆ ಎಂದೋ ಪದ್ಮಭೂಷಣ ಸಿಗಬೇಕಿತ್ತು ಎಂಬ ಅಭಿಪ್ರಾಯ ಇದ್ದರೂ ತಡವಾಗಿಯಾದರೂ ಸಿಕ್ಕಿರುವುದು ಕನ್ನಡಿಗರಿಗೆ ಬಹಳ ಸಂತಸ ತಂದಿದೆ.

ಖ್ಯಾತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸಹಿತ ಕನ್ನಡ ಚಿತ್ರರಂಗದ ಅನೇಕರು ಅನಂತನಾಗ್‌ ಅವರನ್ನು ಅಭಿನಂದಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಅನಂತ್‌ ನಾಗ್ ಜೊತೆಗಿರುವ ಫೋಟೊ ಹಂಚಿಕೊಂಡು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ‘ನನ್ನ ಸ್ಫೂರ್ತಿಯಾಗಿರುವ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದ್ದಕ್ಕೆ ಅಭಿನಂದನೆಗಳು. ಚಿತ್ರರಂಗಕ್ಕೆ ಹಾಗೂ ನಾಟಕ ರಂಗಕ್ಕೆ ನಿಮ್ಮ ಸೇವೆ ತಲೆಮಾರುಗಳಿಗೆ ಸ್ಫೂರ್ತಿ ತುಂಬಿದೆ. ಸರಳತೆಯಲ್ಲಿ ಸಾಧನೆ ಅಡಗಿದೆ ಎಂದು ತೋರಿಸಿದ್ದಕ್ಕೆ ಧನ್ಯವಾದಗಳು. ಕನ್ನಡ ಚಿತ್ರರಂಗದ ರತ್ನ, ನಮ್ಮೆಲ್ಲರ ಪ್ರಿಯ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಅಪಾರ ಸಂತೋಷವಾಯಿತು. ನಿಮ್ಮ ಕಲಾ ಸಾಧನೆ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದಿದ್ದಾರೆ.































 
 

ಅನಂತ್ ನಾಗ್ ಅವರಿಗೆ ಒಂದೇ ರೀತಿಯ ಗಂಭೀರ ಪಾತ್ರಗಳನ್ನೇ ನಿರ್ದೇಶಕರು ನೀಡುತ್ತಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಅನಂತ್ ನಾಗ್ ಅವರನ್ನು ಭಿನ್ನವಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ತನ್ನ ನಿರ್ದೇಶನದ ‘ಸರ್ಕಾರಿ ಹಿರಿಯ ಪಾಠ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತ್ ನಾಗ್ ಅವರಿಗೆ ಭಿನ್ನವಾದ ಪಾತ್ರವನ್ನು ನೀಡಿದರು.

ಈಗಾಗಲೇ ಪ್ಯಾರಾಲಿಂಪಿಕ್ ಪಟು ಹರ್ವಿಂದರ್ ಸಿಂಗ್ ಮುಂತಾದವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ಕನ್ನಡದ ಖ್ಯಾತ ನಟ ಅನಂತ್ ​ನಾಗ್, ಕರ್ನಾಟಕದ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಸೇರಿದಂತೆ 19 ಸಾಧಕರಿಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ನಿನ್ನೆ ಘೋಷಿಸಲಾಗಿದೆ. ಚೆನ್ನೈ ಮೂಲಕ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಇವರಿಬ್ಬರ ಜೊತೆಗೆ ಕೇರಳದ ಖ್ಯಾತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ತೆಲಂಗಾಣದ ದುವ್ವುರ್ ನಾಗೇಶ್ವರ್ ರೆಡ್ಡಿ (ವೈದ್ಯಕೀಯ), ಚಂಡೀಗಢದ ಜಸ್ಟೀಸ್ ಜಗದೀಶ್ ಸಿಂಗ್ ಖೇಹರ್ (ಸಾರ್ವಜನಿಕ ಸಂಪರ್ಕ), ಗುಜರಾತ್​ನ ಕುಮುದಿನಿ ರಜಿನಿಕಾಂತ್ ಲಖಿಯ (ಕಲೆ), ಮರಣೋತ್ತರವಾಗಿ ಜಪಾನ್​ನ ಒಸಮು ಸುಝುಕಿ (ಇಂಡಸ್ಟ್ರಿ), ಮರಣೋತ್ತರವಾಗಿ ಬಿಹಾರದ ಶಾರದಾ ಸಿನ್ಹ (ಕಲೆ) ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top