ಇಡೀ ಬಂಧನ ಪ್ರಕ್ರಿಯೆ ಮುಂಬಯಿ ಪೊಲೀಸರ ಕಟ್ಟುಕತೆ ಎಂದ ಆರೋಪಿಯ ತಂದೆ
ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಾಗಿರುವ ದಾಳಿಯ ಬಗ್ಗೆಯೇ ಹಲವು ಅನುಮಾನಗಳು ಸೃಷ್ಟಿಯಾಗಿರುವ ಬೆನ್ನಿಗೆ ಪೊಲೀಸರು ಬಂಧಿಸಿರುವುದು ನಕಲಿ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂನ ತಂದೆ ಶರೀಫುಲ್ ಫಕೀರ್, ತನ್ನ ಮಗನನ್ನು ವಿನಾಕಾರಣ ಬಂಧಿಸಲಾಗಿದೆ. ಆತ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಹೇಳಿದ್ದಾರೆ.
ಮುಂಬಯಿ ಪೊಲೀಸರು ಅಸಲಿ ಆರೋಪಿ ಬದಲು, ಆರೋಪಿಯಂತೆ ಹೋಲುವ ನನ್ನ ಮಗನನ್ನು ಬಂಧಿಸಿದ್ದಾರೆ. ಸೈಫ್ ಮನೆಗೆ ನುಗ್ಗಿ ದಾಳಿ ಮಾಡಿ ಎಸ್ಕೇಪ್ ಆಗುತ್ತಿರುವ ಸಿಸಿಟಿವಿ ದೃಶ್ಯಗಳಿವೆ. ಈ ದೃಶ್ಯಗಳಲ್ಲಿ ಆರೋಪಿ ಉದ್ದ ಕೂದಲು ಹೊಂದಿದ್ದಾನೆ. ನನ್ನ ಮಗ ಯಾವತ್ತೂ ಉದ್ದ ಕೂದಲು ಹೊಂದಿಲ್ಲ. ಕ್ಲೀನ್ ಶೇವ್ ಮಾಡಿದ ಮುಖ ಸಿಸಿಟಿವಿಯಲ್ಲಿ ಕಾಣುತ್ತಿದೆ. ನನ್ನ ಮಗನ ಮುಖಕ್ಕೂ ಆರೋಪಿ ಮುಖಕ್ಕೆ ಹೋಲಿಕೆ ಇದೆ. ಇದೇ ಕಾರಣಕ್ಕೆ ಪೊಲೀಸರು ಅಸಲಿ ಆರೋಪಿ ಬದಲು ನನ್ನ ಮಗ ಮೊಹಮ್ಮದ್ ಶರೀಫುಲ್ ಇಸ್ಲಾಮ್‌ನನ್ನು ಬಂಧಿಸಿದ್ದಾರೆ ಎಂದು ಶರೀಫುಲ್ ಫಕೀರ್ ಹೇಳಿದ್ದಾರೆ. ನನ್ನ ಮಗ ಪೊಲೀಸರಿಗೆ ಸುಲಭ ತುತ್ತು. ಕಾರಣ ಆತ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ, ಇಲ್ಲಿನ ಆರ್ಥಿಕ ಪರಿಸ್ಥಿತಿಯಿಂದ ಬೇರೆ ದಾರಿ ಕಾಣದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ, ಇದು ನಿಜ. ಇದೇ ಕಾರಣದಿಂದ ಪೊಲೀಸರು ಸುಲಭವಾಗಿ ಮಗನನ್ನು ಟಾರ್ಗೆಟ್ ಮಾಡಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಸುಲಭವಾಗಿ ಇಬ್ಬರು ಬೇರೆ ಬೇರೆ ಅನ್ನೋದು ಪತ್ತೆ ಹಚ್ಚಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ತಂದೆ ಶರೀಫುಲ್ ಫಕೀರ್ ಹೇಳಿದ್ದಾರೆ.
ನನಗೆ ಮೂವರು ಮಕ್ಕಳು. ಮೊದಲ ಮಗ ಢಾಕಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೇ ಮಗ ಶರೀಫುಲ್ ಇಸ್ಲಾಮ್ 10ನೇ ತರಗತಿ ಅರ್ಧಕ್ಕೆ ಬಿಟ್ಟು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಕೆಲಸಕ್ಕೆ ಸೇರಿದ.ಆದರೆ ಇಲ್ಲಿ ಸರಿಯಾದ ಕೆಲಸ ಸಿಗಲಿಲ್ಲ. ಸಿಕ್ಕ ಕೆಲಸದಲ್ಲಿ ಸಂಬಳವೂ ಸಿಗಲಿಲ್ಲ. ಹೀಗಾಗಿ ಅಕ್ರಮವಾಗಿ ಭಾರತ ಪ್ರವೇಶ ಮಾಡಿದ್ದಾನೆ. ಶರೀಫುಲ್ ಇಸ್ಲಾಮ್ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ. ನಾವು ಅತ್ಯಂತ ಬಡವರು, ಆದರೆ ಕಳ್ಳತನ, ಅಪರಾಧ ಮಾಡುವ ಕುಟುಂಬವಲ್ಲ ಎಂದು ಶರೀಫುಲ್ ಫಕೀರ್ ಹೇಳಿದ್ದಾರೆ.
ನನ್ನ ಮಗನ ಬಂಧನ ರಾಜತಾಂತ್ರಿಕ ವಿಚಾರವಾಗಿದೆ. ಇಲ್ಲಸಲ್ಲದ ಆರೋಪ ಹೊರಿಸಿ ನನ್ನ ಮಗನನ್ನು ಬಂಧಿಸಿದ್ದಾರೆ. ಈ ವಿಚಾರವನ್ನು ವಿದೇಶಾಂಗ ಇಲಾಖೆಯಲ್ಲಿ ಪ್ರಶ್ನಿಸುತ್ತೇನೆ. ಅಕ್ರಮವಾಗಿ ಭಾರತ ಪ್ರವೇಶ ಮಾಡಿರುವುದು ತಪ್ಪು. ಆದರೆ ಸದ್ಯ ಆತನ ಬಂಧಿಸಿರುವ ಪ್ರಕರಣ ನಕಲಿ ಎಂದು ಹೇಳಿದ್ದಾರೆ.
ಹಲ್ಲೆಯ ಬಗ್ಗೆ ಅನುಮಾನ
ಸೈಫ್ ಮೇಲಾಗಿರುವ ಹಲ್ಲೆಯ ಬಗ್ಗೆಯೇ ಶಿವಸೇನೆಯ ನಾಯಕ ಸಂಜಯ್ ರಾವತ್, ಬಿಜೆಪಿ ನಾಯಕ ನಿತೇಶ್ ರಾಣೆ ಸಹಿತ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸೈಫ್‌ಗೆ ಗಂಭೀರ ಗಾಯವಾಗಿದೆ, ನಾಲ್ಕು ತಾಸು ಸರ್ಜರಿ ಮಾಡಲಾಗಿದೆ, ಬೆನ್ನುಹುರಿಯ ತನಕ ಚಾಕು ಹೊಕ್ಕಿತ್ತು ಎಂದೆಲ್ಲ ಹೇಳಲಾಗಿತ್ತು. ಆದರೆ ನಾಲ್ಕೇ ದಿನದಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕುಣಿದಾಡಿಕೊಂಡು ಮನೆಗೆ ಹೋಗಿದ್ದಾರೆ. ಇಷ್ಟು ಗಾಯವಾದ ವ್ಯಕ್ತಿ ಹೀಗೆ ಚಿಕಿತ್ಸೆ ಪಡೆದುಕೊಂಡು ಆರಾಮವಾಗಿ ಓಡಾಡುತ್ತಿರುವುದು ಪರಮಾದ್ಭುತ, ಮುಂಬಯಿಯ ವೈದ್ಯರು ಹೀಗೆ ಗಂಭೀರ ಗಾಯವನ್ನು ನಾಲ್ಕೇ ದಿನದಲ್ಲಿ ವಾಸಿ ಮಾಡುವಷ್ಟು ಪರಿಣತಿ ಪಡೆದಿರುವುದು ಗ್ರೇಟ್ ಎಂದೆಲ್ಲ ನಿರುಪಮ್ ಟೀಕಿಸಿದ್ದಾರೆ. ಕೆಲವರು ಇದು ಪ್ರಚಾರಕ್ಕಾಗಿ ನಟನೇ ಮಾಡಿರುವ ತಂತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ನಿ ಕರೀನಾ ಕಪೂರ್ ಮನೆಯಲ್ಲೇ ಇದ್ದರೂ ಆಸ್ಪತ್ರೆಗೆ ಕರೆದೊಯ್ದಿರುವುದು ಮಗ ಇಬ್ರಾಹಿಂ. ಯಾವ ಪತ್ನಿಯೂ ಗಂಡ ರಕ್ತ ಸುರಿಸುತ್ತಾ ಇರುವಾಗ ಮನೆಯಲ್ಲಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.