ಗೆಳೆಯರಾಗಿದ್ದ ಎರಡು ಮೇಳಗಳ ಕಲಾವಿದರ ನಡುವೆ ಹಣಕಾಸಿನ ತಕರಾರು
ಪಡುಬಿದ್ರಿ: ಹಣಕಾಸು ವಹಿವಾಟಿನ ತಕರಾರಿನ ಹಿನ್ನೆಲೆಯಲ್ಲಿ ಒಂದು ಮೇಳದ ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಯಕ್ಷಗಾನ ಕಲಾವಿದ ಬರ್ಬರವಾಗಿ ಹಲ್ಲೆ ಮಾಡಿದ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಸಸಿಹಿತ್ಲು ಮೇಳದ ಕಲಾವಿದ ಪಡುಬಿದ್ರಿಯ ನಿತಿನ್ ಕುಮಾರ್ ಮೇಲೆ ಪಾವಂಜೆ ಮೇಳದ ಕಲಾವಿದ ಸಚಿನ್ ಅಮೀನ್ ಉದ್ಯಾವರ, ಅವರ ತಂದೆ ಕುಶಾಲಣ್ಣ ಹಾಗೂ ಓರ್ವ ಫೈನಾನ್ಶಿಯರ್ ಸೇರಿಕೊಂಡು ಉದ್ಯಾವರದ ಮನೆಯೊಂದರಲ್ಲಿ ಜ.21ರಂದು ಕೂಡಿಹಾಕಿ ಕಂಬಳದ ಕೋಣಗಳಿಗೆ ಹೊಡೆಯುವ ಬಾರುಕೋಲಿನಲ್ಲಿ ಹಲ್ಲೆ ಮಾಡಿದ್ದಾರೆ. ನಿತಿನ್ ಮತ್ತು ಸಚಿನ್ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ ಫೈನಾನ್ಸ್‌ನಿಂದ ಸಾಲ ಪಡೆದುಕೊಂಡ ವಿಚಾರದಲ್ಲಿ ಇವರ ಮಧ್ಯೆ ವೈಮನಸ್ಸು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಬೆತ್ತ, ದೊಣ್ಣೆಯಿಂದ ಹೊಡೆದು, ಕಾಲಿನಿಂದ ಒದ್ದು ಸಿಕ್ಕಾಪಟ್ಟೆ ಹಲ್ಲೆ ಮಾಡಿದ್ದರು. ಬಳಿಕ ಬಲವಂತವಾಗಿ ಖಾಲಿ ಬಾಂಡ್‌ಪೇಪರ್‌ಗೆ ಸಹಿ ಮಾಡಿಸಿ ಸಂಜೆ ಪಡುಬಿದ್ರಿಗೆ ಕರೆತಂದು ಬಿಟ್ಟುಹೋಗಿದ್ದರು. ಅಂದು ರಾತ್ರಿ ಹೊಡೆತದ ನೋವಿನಲ್ಲೇ ಯಕ್ಷಗಾನ ಪ್ರದರ್ಶನದಲ್ಲಿ ವೇಷ ಮಾಡಿದ್ದ ನಿತಿನ್ ಮರುದಿನ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಹಲ್ಲೆ ಕುರಿತು ದೂರು ನೀಡಿದ್ದಾರೆ.