ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪನೆಯಾದ, 115 ವರ್ಷಗಳ ಇತಿಹಾಸವಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‍ನ ಮುಂದಿನ 5 ವರ್ಷಗಳ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಜ.25ರಂದು ಚುನಾವಣೆ ನಡೆಯಲಿದ್ದು, ಕೇವಲ ರಾಜಕೀಯ ಕಾರಣಕ್ಕೆ ಸಂಘದ ಹಿಂದಿನ ಆಡಳಿತ ಮತ್ತು ಸಹಕಾರ ಭಾರತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕಳೆದ ಆಡಳಿತ ಮಂಡಳಿ ಅವಧಿಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳು ಕಾನೂನು ಬದ್ಧವಾಗಿಯೇ ಇದೆ ಎಂದು ಸಹಕಾರ ಭಾರತಿ ಮತ್ತು ಬಿಜೆಪಿ ಮುಖಂಡರು ಹಾಗೂ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರು ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪುತ್ತೂರು ಸಹಕಾರ ಭಾರತಿ ಅಧ್ಯಕ್ಷರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಮತ್ತು ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ, ಬ್ಯಾಂಕಿನ ಸದಸ್ಯರೊಬ್ಬರು ಎತ್ತಿದ ಪ್ರಶ್ನೆಗಳಿಗೆಲ್ಲ ಮಹಾಸಭೆಗಳಲ್ಲಿ ಉತ್ತರ ನೀಡಲಾಗಿದೆ. ನಿಯಮ ಪ್ರಕಾರವೇ ನಿರ್ಣಯ ಕೈಗೊಂಡು ಜಾರಿಗೊಳಿಸಲಾಗಿದೆ. ಬ್ಯಾಂಕಿನ ವಿರುದ್ಧ ತನಿಖೆ ನಡೆಸಲು ಸದಸ್ಯರೊಬ್ಬರು ಆರ್ ಟಿಐಗೆ ನೀಡಿದ ದೂರಿನ ಪ್ರಕಾರ ತನಿಖೆ ನಡೆದು ಅವರ ಅರ್ಜಿ ತಿರಸ್ಕರಿಸಲ್ಪಟ್ಟಿದೆ ಎಂದರು.
ಹಿಂದಿನ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಸಿಬ್ಬಂದಿಗಳಿಗೆ, ಸದಸ್ಯರಿಗೆ ಕೆಲವೊಂದು ಉಡುಗೊರೆ ನೀಡಲಾಗಿದೆ. ಅದು ಜಾರಿಯಾಗಿದ್ದು ಇತ್ತೀಚೆಗೆ ಎಂಬುದು ಕಾಕತಾಳೀತಯ ಮಾತ್ರ. ಆದರೆ ಚಿನ್ನದ ಉಂಗುರ ನೀಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ನಿರ್ಧಾರ ಕೈಗೊಳ್ಳಲಾಗಿದೆ. ಸಿಇಒ ನೇಮಕಾತಿ ವಿಚಾರವೂ ಕಾನೂನುಬದ್ಧವಾಗಿದೆ. ಆರೋಪ ಮಾಡುವ ಸದಸ್ಯರು ಹೇಳುವ ಯಾವುದೇ ವಿಚಾರದಲ್ಲೂ ತನಿಖೆ ನಡೆಯುವುದಿದ್ದರೆ ನಾವು ತನಿಖೆ ಎದುರಿಸಲು ಸಿದ್ಧ ಎಂದರು.
ಮತದಾರರ ಪಟ್ಟಿ ನೀಡಿಲ್ಲ ಎಂದು ಅಭ್ಯರ್ಥಿಯೊಬ್ಬರು ಆಪಾದಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ನಗರ ಮಂಡಲ ಬಿಜೆಪಿ ಅಧ್ಕಕ್ಷರಾದ ಶಿವಕುಮಾರ್ ಪಿ.ಬಿ., ಕಾನೂನು ಪ್ರಕಾರ 200 ರೂ. ಕಟ್ಟಿ ಮತದಾರರ ಪಟ್ಟಿ ಪಡೆಯಬಹುದು. ನಾನೂ ಹಾಗೆಯೇ ಪಡೆದುಕೊಂಡಿದ್ದೇನೆ. ಹೀಗಾಗಿ ಈ ಆರೋಪದಲ್ಲಿ ಹುರುಳಿಲ್ಲ ಎಂದರು. ಆರೋಪ ಮಾಡುತ್ತಲೇ ಇರುವ ಸದಸ್ಯರನ್ನು ಹಿಂದೆಯೇ ಕರೆಸಿಕೊಂಡು ಅವರು ಮುಂದಿಟ್ಟ ವಿಚಾರಗಳ ಬಗ್ಗೆ ಸ್ಪಷ್ಟೀಕರಣ ನೀಡಲಾಗಿತ್ತು. ಆದರೂ ಅವರು ಒಪ್ಪದ ಕಾರಣ ಆರೋಪ ಮುಂದುವರಿಸಿದ್ದಾರೆ ಎಂದರು.
ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿದ್ದವರಿಗೆ ಈ ಬಾರಿ ಸಹಕಾರ ಭಾರತಿಯಿಂದ ಟಿಕೆಟ್ ನೀಡದ ಕಾರಣ ಅವರು ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ. ಅವರು ಸತತ 4 ಬಾರಿ ನಿರ್ದೇಶಕರಾಗಿದ್ದವರು. ಈ ಬಾರಿ ಹೊಸಬರಿಗೆ ಸಾಮಾಜಿಕ ನ್ಯಾಯದ ಅಧಾರದಲ್ಲಿ ಅವಕಾಶ ನೀಡಬೇಕಾಗಿದ್ದ ಕಾರಣ ಅವರಿಗೆ ನೀಡಲಿಲ್ಲ ಎಂದು ಸಹಕಾರ ಭಾರತಿ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಹೇಳಿದರು.
ಮೃತರ ಹೆಸರು ಮತದಾರರ ಪಟ್ಟಿಯಲ್ಲಿ
ಬ್ಯಾಂಕಿನ ಹಿರಿಯ ಸದಸ್ಯರೊಬ್ಬರು 2022ರಲ್ಲಿ ಮೃತಪಟ್ಟಿದ್ದು, ಪ್ರಸ್ತುತ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಈಗಲೂ ಇದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ನಿಕಟಪೂರ್ವ ಅಧ್ಕಕ್ಷರಾದ ಕಿಶೋರ್ ಕೊಳತ್ತಾಯ, ನಿಧನಗೊಂಡ ಸದಸ್ಯರ ಕಾನೂನುಬದ್ಧ ಹಕ್ಕುದಾರರು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಅವರ ಹೆಸರನ್ನು ತೆಗೆಯಲು ಸಾಧ್ಯ. ಅಂಥ ಯಾವುದೇ ಅರ್ಜಿ ಬಾರದ ಹಿನ್ನೆಲೆಯಲ್ಲಿ ಹೆಸರು ಉಳಿದುಕೊಂಡಿದೆ ಎಂದರು.
2022ರಲ್ಲಿ ಆ ಸದಸ್ಯರು ನಿಧನರಾದ ಕಾರಣ ಸತತ 3 ಮಹಾಸಭೆಗಳಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಅವರ ಹೆಸರು ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಇರಬಾರದಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2023ರಲ್ಲಿ ಬ್ಯಾಂಕಿನ ಬೈಲಾ ತಿದ್ದುಪಡಿಯಾಗಿದ್ದು, ಅದರ ಪ್ರಕಾರ ಮತದಾರರ ಪಟ್ಟಿ ತಯಾರಿಸಲಾಗಿದೆ. ಆದರೂ ಇದೀಗ ಮೃತರ ಹೆಸರು ಪಟ್ಟಿಯಲ್ಲಿರುವ ವಿಚಾರ ವಿವಾದವಾಗಿರುವ ಕಾರಣ ಅವರ ಕಾನೂನು ಬದ್ಧ ಹಕ್ಕುದಾರರನ್ನು ಸಂಪರ್ಕಿಸಿ ಅಧಿಕೃತ ಮಹಿತಿ ಪಡೆದು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪಕ್ಷದ ಮುಖಂಡರಾದ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.