ಕಳೆಂಜ: ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡಿರುವ ಘಟನೆ ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ನಡೆದಿದೆ.
ಕಳೆಂಜ ಗ್ರಾಮದ ಗೋಶಾಲೆ ಮಾರ್ಗ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದರಿಂದ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದಾಗ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ತಳ್ಳಿ ಹಾಕಿದೆ. ಈ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ ಕೇಳಿಸದೇ ಇರುವುದರಿಂದ ಆನೆ ಬರುತ್ತಿರುವ ಬಗ್ಗೆ ಅವರ ಗಮನಕ್ಕೆ ಬರಲಿಲ್ಲ. ಘಟನೆ ಬಳಿಕ ಅವರು ಬೊಬ್ಬೆ ಹೊಡೆಯುವುದನ್ನು ಸ್ಥಳೀಯರು ಗಮನಿಸಿ, ಸ್ಥಳಕ್ಕೆ ಜಮಾಯಿಸಿ ಆನೆಯನ್ನು ಕಾಡಿಗೆ ಓಡಿಸಿದರು.
ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.