ಪುತ್ತೂರು : ವಾಹನಗಳಲ್ಲಿ ವಿಚಿತ್ರ ರೀತಿಯ ಸ್ಟಿಕ್ಕರ್, ಪೋಸ್ಟರ್’ ಗಳನ್ನು ಅಂಟಿಸಿ ಪ್ರದರ್ಶಿಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಸಾರಿಗೆ ಇಲಾಖೆ ಅಧಿಕಾರಿಗಳೇ ನಿಮಗಿದೋ ನ್ಯೂಸ್ ಪುತ್ತೂರು ವತಿಯಿಂದ ಹೃದ್ಯ ಅಭಿನಂದನೆಗಳು.
‘Better late than never’ ಎಂಬಂತೆ ತಡವಾಗಿಯಾದರೂ ದಿಟ್ಟ ನಿರ್ಧಾರ ಕೈಗೊಂಡ ನೀವು ಶ್ಲಾಘನಾರ್ಹರು. ನಿಮ್ಮ ಈ ನಡೆಗೆ ನ್ಯೂಸ್ ಪುತ್ತೂರು ಸರ್ವತ್ರ ಬೆಂಬಲ ನೀಡುತ್ತದೆ.
ಹಾಗೆಯೇ ನಮ್ಮದೊಂದು ಮನವಿ. ಈ ಕೆಳಗಿನ ಅಂಶಗಳನ್ನೂ ದಯವಿಟ್ಟು ಪರಿಗಣಿಸುವಿರಾ?
1) ಇಲಾಖೆಯ ನಿಯಮಾನುಸಾರ ವಾಹನ ಉತ್ಪಾದಕ ಕಂಪನಿಗಳು ಅಳವಡಿಸುವ ಲೈಟ್ ಮತ್ತು ಹಾರ್ನ್’ಗಳನ್ನು ಹೊರತುಪಡಿಸಿ ಇತರ ಸೂಕ್ತವಲ್ಲದ, ಮಾದರಿಯ ಲೈಟ್ ಮತ್ತು ಹಾರ್ನ್’ಗಳನ್ನು ಅಳವಡಿಸುವುದನ್ನು ದಯವಿಟ್ಟು ನಿಷೇಧಿಸಿ. ಅನೇಕ ಬಾರಿ ಕರ್ಕಶ ಮತ್ತು ಸಂಗೀತಮಯ ಹಾರ್ನ್’ ಗಳು ಅತೀ ಕಿರಿಕಿರಿಯನ್ನುಂಟು ಮಾಡುತ್ತವೆ. ಕೆಲವು ಲೈಟ್’ಗಳು ಕಣ್ಣು ಕೋರೈಸುವಂತಿದ್ದು ವಿರುದ್ಧ ದಿಕ್ಕಿನ ಚಾಲಕ ಅಪಘಾತಕ್ಕೆ ತುತ್ತಾಗುವ ಸಂದರ್ಭಗಳೂ ಇವೆ. ವಾಹನದಲ್ಲಿ ಇಂಡಿಕೇಟರ್’ ಗೆ ಮಾತ್ರವೇ ಮಿನುಗುವ ಲೈಟ್ ಇರಬೇಕು. ಇತರ ಲೈಟ್’ಗಳು ಮಿನುಗದಿದ್ದಲ್ಲಿ ವಾಹನ ಚಾಲನೆ ಗೊಂದಲ ರಹಿತವಾಗಿರುತ್ತದೆ. ಹಾಗೆಯೇ ವಾಹನದ ಇಂಡಿಕೇಟರ್ ಲೈಟ್, ಕಿತ್ತಳೆ ಬಣ್ಣದ್ದೇ ಇರಬೇಕಲ್ಲವೇ? ದಯವಿಟ್ಟು ಬಿಳಿ, ನೀಲಿ ಮತ್ತು ಇತರ ಬಣ್ಣದ ಇಂಡಿಕೇಟರ್ ಲೈಟ್ ಇಲ್ಲದ ಹಾಗೆ ನೋಡಿಕೊಳ್ಳಿ.
2) ವಾಹನಗಳಲ್ಲಿ ಕನಿಷ್ಠ ಮುಂಭಾಗ ಮತ್ತು ಹಿಂಭಾಗಗಳಲ್ಲಿ reflectors ಕಡ್ಡಾಯವಾಗಿ ಇರಲಿ. ರಾತ್ರಿ ವೇಳೆ ಇತರ ಸೂಚನಾ ಲೈಟ್’ಗಳು ಕಾರ್ಯನಿರ್ವಹಿಸದಿದ್ದರೂ ಕನಿಷ್ಠ ಈ reflector ಆದರೂ ಆ ಕಾರ್ಯವನ್ನು ಮಾಡುತ್ತದೆ.
3) ವಾಹನಗಳ ಕಿಟಕಿ ಗಾಜುಗಳಿಗೆ ಬಣ್ಣದ sticker ಅಂಟಿಸಬಾರದು ಎಂಬ ಆ ಶ್ರೇಷ್ಠ ನಿಯಮವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲರ ವಾಹನಗಳಿಗೆ ಅನ್ವಯಿಸಲಿ. ಆ ವಿಚಾರವಾಗಿ ಯಾರೂ ಸಹ ಯಾರನ್ನೇ ಆಗಲಿ ಪ್ರಶ್ನಿಸುವಂತಹ ಸನ್ನಿವೇಶ ಬಾರದಿರಲಿ.
4) Over Speed ನಲ್ಲಿ ಚಲಾಯಿಸುವ ಚಾಲಕನ ಚಾಲನಾ ಪರವಾನಗಿಯನ್ನು ನಿಗದಿತ ಅವಧಿಯ ತನಕ ಮುಟ್ಟುಗೋಲು ಹಾಕಿಕೊಳ್ಳುವ ನಿ ಯಮ ಕಟ್ಟು ನಿಟ್ಟಾಗಿ ಜಾರಿಗೆ ಬರಲಿ.
5) ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವ ಚಾಲಕರಿಗೆ ಕನಿಷ್ಠ 50,000/- ದಂಡ ವಿಧಿಸಿ, ಅದರಲ್ಲಿ ಅರ್ಧಾಂಶ ಹಣವನ್ನು ಬಾಧಿತರಿಗೆ ನೀಡುವಂತಾಗಲಿ. ತಪ್ಪಿತಸ್ಥ ಚಾಲಕನ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರಿಗೆ ಸೂಕ್ತ ಶಿಕ್ಷೆ ಆಗಲಿ. (ಏಕಮುಖ ರಸ್ತೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಚಾಲನೆ ಮಾಡುತ್ತಿರುವಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವ ವಾಹನಗಳನ್ನು ಕಂಡಾಗ ಆಗುವ ಭಯ, ಉದ್ವೇಗಗಳಿಗೆ ಪರಿಹಾರ ಬೇಡವೇ?)
6) ಅಂಗಡಿ ಮುಂಗಟ್ಟುಗಳು ಮತ್ತು ಸಭಾಭವನಗಳಂತಹ ಸ್ಥಳಗಳಲ್ಲಿ ವಾಹನಗಳ parking ವ್ಯವಸ್ಥೆಗೆ ಸಂಬಂಧಪಟ್ಟವರೆ ಜವಾಬ್ದಾರಿ ವಹಿಸುವಂತಾಗಲಿ.
7) Wrong parking ಖಾಯಿಲೆಗೂ ಸೂಕ್ತ ಮದ್ದು ಸಿಗಲಿ.
ಇದು ‘ನ್ಯೂಸ್ ಪುತ್ತೂರು’ ನ ಸಾಮಾಜಿಕ ಕಳಕಳಿಯ ಮನವಿ