ವಿಚಾರಣೆಗೆ ಹಾಜರಾಗದಿರುವುದಕ್ಕೆ ಬಂಧನ ವಾರಂಟ್ ಜಾರಿ
ಮುಂಬಯಿ: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಅವರಿಗೆ ಮುಂಬಯಿ ನ್ಯಾಯಾಲಯವೊಂದು ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂರು ತಿಂಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು ದಂಡ ವಿಧಿಸಿದೆ. ರಾಮ್‌ಗೋಪಾಲ್ ವರ್ಮ ಸೋಮವಾರವಷ್ಟೇ ಹೊಸಚಿತ್ರ ಸಿಂಡಿಕೇಟ್‌ನ ಘೋಷಣೆ ಮಾಡಿದ್ದರು. ಇದಾದ ಮರುದಿನವೇ ಕೋರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ. ಇಷ್ಟು ಮಾತ್ರವಲ್ಲದೆ ತೀರ್ಪಿನ ದಿನವೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.
ಅಂಧೇರಿಯ ನ್ಯಾಯಾಲಯದಲ್ಲಿ ಏಳು ವರ್ಷಗಳಿಂದ ಚೆಕ್ ಬೌನ್ಸ್ ಕೇಸ್ ನಡೆಯುತ್ತಿದೆ. ಆದರೆ ರಾಮ್‌ಗೋಪಾಲ್ ವರ್ಮ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಾಧೀಶರು ಕೂಡಲೇ ನಿರ್ದೇಶಕನನ್ನು ಬಂಧಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಮೂರು ತಿಂಗಳ ಜೈಲು ಶಿಕ್ಷೆಯ ಜತೆಗೆ ವರ್ಮಗೆ 3.72 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಮೊತ್ತ ಪಾವತಿಸದಿದ್ದರೆ ಮತ್ತೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಸತ್ಯ, ಶಿವ, ರಂಗೀಲಾ, ಸರ್ಕಾರ್‌ನಂಥ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ರಾಮ್‌ಗೋಪಾಲ್ ವರ್ಮ ಕಳೆದ ಕೆಲವು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. ಪೂರ್ತಿ ನಷ್ಟದಲ್ಲಿರುವ ವರ್ಮ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.