ಒಂದು ಕಾಲದ ಗೆಳೆಯರ ನಡುವೆ ತೀವ್ರ ಕಚ್ಚಾಟ
ಬೆಂಗಳೂರು: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಬಿಜೆಪಿಯಲ್ಲಿ ಈಗ ನಡೆಯುತ್ತಿರುವ ಶ್ರೀ ರಾಮುಲು ಮತ್ತು ಜನಾರ್ದನ ರೆಡ್ಡಿ ಕಲಹವೇ ಸಾಕ್ಷಿ. ಬಳ್ಳಾರಿಯ ಪ್ರಭಾವಿ ರಾಜಕೀಯ ನಾಯಕರಾಗಿದ್ದ ಶ್ರೀರಾಮುಲು ಮತ್ತು ರೆಡ್ಡಿ ಒಂದು ಕಾಲದಲ್ಲಿ ರಾಮ-ಲಕ್ಷ್ಮಣರಂತೆ ಪಕ್ಷಕ್ಕಾಗಿ ದುಡಿದವರು. ಆದರೆ ಈಗ ಪರಸ್ಪರರ ವಿರುದ್ಧ ಕತ್ತಿ ಮಸೆಯುವ ಹಂತಕ್ಕೆ ಅವರ ದ್ವೇಷ ಬಂದಿದೆ.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಕಿಡಿ ಹಚ್ಚಿದ್ದು ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಎನ್ನಲಾಗಿದೆ. ಇದು ಈಗ ಬಿಜೆಪಿಯಲ್ಲಿ ಮತ್ತೊಂದು ಕಲಹಕ್ಕೆ ವೇದಿಕೆ ಸೃಷ್ಟಿಸಿದೆ.
ಇಲ್ಲಿಯವರೆಗೆ ವಿಜಯೇಂದ್ರ ಮತ್ತು ಯತ್ನಾಳ್ ಬಣದ ನಡುವೆ ಕಚ್ಚಾಟ ನಡೆಯುತ್ತಿತ್ತು. ಈಗ ರೆಡ್ಡಿ ಮತ್ತು ರಾಮುಲು ಕಲಹ ಬಿಜೆಪಿ ಹೈಕಮಾಂಡ್‌ಗೆ ಹೊಸ ತಲೆನೋವು ತಂದಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲೇ ರಾಮುಲು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ನಾನು ಸರಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಸಂಡೂರು ಸೋಲನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದು ತ್ಯಾಗ ಮಾಡಿದ ಹಿರಿಯ ನಾಯಕ ನಾನು.
ನನಗೆ ಈಗ ಪಕ್ಷದ ವೇದಿಕೆಯಲ್ಲೇ ಅಪಮಾನ ಆಗಿದೆ ಎಂದು ಶ್ರೀರಾಮುಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್, ಜನಾರ್ದನ ರೆಡ್ಡಿ ಹಾಗೂ ವಿಜಯೇಂದ್ರ ವಿರುದ್ಧ ಕೂಗಾಡಿದ್ದಾರೆ.
ಜನಾರ್ದನ ರೆಡ್ಡಿ ತನ್ನನ್ನು ರಾಜಕೀಯವಾಗಿ ಮುಗಿಸಲು ತಂತ್ರ ಮಾಡುತ್ತಿದ್ದಾರೆ ಎನ್ನುವುದು ಶ್ರೀರಾಮುಲು ಆರೋಪ. ಹೈಕಮಾಂಡ್ ಮೆಟ್ಟಿಲೇರಲು ರಾಮುಲು ತಯಾರಿ ನಡೆಸಿದ್ದು ಬಿ.ಎಲ್ ಸಂತೋಷ್ ಅವರಿಗೂ ದೂರು ಕೊಟ್ಟು ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.