ಉಪ್ಪಿನಂಗಡಿ : ಶ್ರೀಮಂತನೆಂದು ಹೇಳಿಕೊಂಡು ಯುವತಿಯೊಬ್ಬಳನ್ನು ಯಾಮಾರಿಸಿ ವಿವಾಹವಾಗಿದ್ದ ವ್ಯಕ್ತಿಗೆ ಆತನಲ್ಲಿ ಬಸ್ಸು ಟಿಕೆಟ್ ಖರೀದಿಸಲು ಹಣವಿಲ್ಲವೆಂದು ತಿಳಿಯುತ್ತಲೇ ಪತ್ನಿ ಸಾರ್ವಜನಿಕರ ಎದುರೇ ಆತನಿಗೆ ಹೊಡೆದ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಯುವತಿಯಾಗಿದ್ದು, ಆಕೆಯ ಗಂಡ ಸಮಿರುಲ್ಲಾ ಹಿಂದಿ ಭಾಷಿಗನಾಗಿದ್ದಾನೆ. ಯುವತಿಯು ಮಧ್ಯಮ ಕುಟುಂಬದಿಂದ ಬಂದಿದ್ದು, ಆಕೆಯ ಮುಂದೆ ಸಮಿರುಲ್ಲಾ ಶ್ರೀಮಂತನೆಂದು ತಿಳಿಸಿದ್ದ. ಅವನ ಐಷರಾಮಿ ಜೀವನ ಶೈಲಿಗೆ ಯುವತಿ ಮಾರು ಹೋಗಿದ್ದಾಳೆ ಅವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದು, ಇವರಿಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧವೂ ಇತ್ತೆನ್ನಲಾಗಿದೆ. ತನ್ನ ಹೆತ್ತವರನ್ನು ದಿಕ್ಕರಿಸಿ ಸಮಿರುಲ್ಲಾನನ್ನು ಆಕೆ ವಿವಾಹವಾಗಿದ್ದಳು. ಇನ್ನು ತನ್ನ ಜೀವನ ಹೈಫೈ ಆಗುತ್ತದೆ ಎಂದು ನಂಬಿಕೊಂಡು ಪತಿಯ ಜತೆ ಆಕೆ ಬೆಂಗಳೂರಿಗೆ ಬಂದಿದ್ದಾಳೆ. ಅಲ್ಲಿ, ಒಂದಷ್ಟು ದಿನ ಸಮಿರುಲ್ಲಾ ತನ್ನ ತಳುಕು ಬಳುಕಿನ ಜೀವನವನ್ನು ಮುಂದುವರಿಸಿದ್ದಾನೆ. ಈ ಮಧ್ಯೆ ಆಕೆ ಗರ್ಭಿಣಿಯಾಗಿದ್ದು, ಮಗುವೂ ಆಗಿದೆ.
ದಿನಗಳೆಯುತ್ತಾ ಯುವತಿಗೆ ಸಮೀರುಲ್ಮಾನ ನಿಜರೂಪ ತಿಳಿಯಲಾರಂಬಿಸಿತು. ಎರಡು ದಿನಗಳ ಹಿಂದೆ, ಬೆಂಗಳೂರಿನಿಂದ ಇತ್ತ ಪ್ರಯಾಣ ಬೆಳೆಸಿದಾಗ ಬಸ್ ಹಣವಿಲ್ಲದ ಸಮೀರುಲ್ಲಾನನ್ನು ಕಂಡಕ್ಟರ್ ಬಸ್ಸಿನಿಂದ ಇಳಿಸಿದ್ದಾನೆ. ಆಕೆಗೆ ಗಂಡನ ಬಳಿ ಟಿಕೆಟ್ ಗೂ ಹಣವಿಲ್ಲವೆಂಬ ವಿಚಾರ ತಿಳಿದಿದೆ. ಬಸ್‌ನಿಂದ ಇಳಿಸಿದ್ದರಿಂದ ಅವಮಾನವಾದಂತಾಗಿ ಕುಪಿತಗೊಂಡ ಆಕೆ ರಸ್ತೆ ಬದಿಯಲ್ಲಿ ಗಂಡನಿಗೆ ಹೊಡೆಯುತ್ತ ಜಗಳವಾಡಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ಯುದು, ವಿಚಾರಣೆ ನಡೆಸಿ ಅವರ ದಾಖಲೆಗಳನ್ನು ಪರಿಶೀಲಿಸಿದರು. ಬಳಿಕ ಬಸ್ ಟಿಕೆಟ್ ದರವನ್ನು ತಾವೇ ನೀಡಿ ಅವರಿಬ್ಬರನ್ನೂ ಮತ್ತೆ ಬೆಂಗಳೂರು ಬಸ್‌ನಲ್ಲಿ ವಾಪಸ್ ಕಳಿಸಿದ್ದಾರೆ.