ಭಾವನೆ ಕೆರಳಿಸುವ ಸ್ಟಿಕ್ಕರ್, ಪೋಸ್ಟರ್‌ಗಳ ವಿರುದ್ಧ ಕ್ರಮ
ಬೆಂಗಳೂರು: ವಾಹನಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದು, ದಂಡದ ಜೊತೆ ವಾಹನ ಸೀಜ್ ಆಗುವ ಸಾಧ್ಯತೆಯೂ ಇದೆ.
ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳ ಮೇಲೆ ವಿವಾದಾತ್ಮಕ ಫೋಟೊ ಅಥವಾ ಬರಹಗಳ ಸ್ಟಿಕ್ಕರ್ ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಮಚ್ಚು, ಲಾಂಗ್‌ನಂಥ ಆಯುಧಗಳನ್ನು ಹಿಡಿದು ರಕ್ತ ಹರಿಸುವಂಥ ಸಿನಿಮಾಗಳ ಸ್ಟಿಕ್ಕರ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ.
ಭಾವನೆಗಳನ್ನು ಕೆರಳಿಸುವ ಬರಹಗಳು, ಫೋಟೊಗಳನ್ನು ಹಾಕಿದರೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ. ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದೆ. ಅಶ್ಲೀಲ ಹಾಗೂ ಕ್ರೌರ್ಯವನ್ನು ಬಿಂಬಿಸುವ ಬರಹಗಳು, ಕೆಲವು ಪೋಸ್ಟರ್‌ಗಳನ್ನ ಆಟೋರಿಕ್ಷಾ, ಟ್ಯಾಕ್ಸಿಗಳ ಮೇಲೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಇದು ನಕಾರಾತ್ಮಕ ಪರಿಣಾಮ ಬೀಳುತ್ತಿದ್ದು, ಸಾರಿಗೆ ನಿಯಮಗಳನ್ನ ಉಲ್ಲಂಘಿಸಿ ಇಂತಹ ಪೋಸ್ಟರ್‌ಗಳನ್ನು ಹಾಕುವುದನ್ನು ನಿಲ್ಲಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೆಲವು ಕಂಪನಿ, ಸಂಸ್ಥೆಗಳ ಜಾಹೀರಾತುಗಳನ್ನು ಪೋಸ್ಟರ್ ಕವರ್ ಹಾಕಿಕೊಳ್ಳಲು ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿದ್ದು, ಅದನ್ನು ಹೊರತುಪಡಿಸಿ ಬೇರೆ ಪೋಸ್ಟರ್‌ಗಳನ್ನು ಹಾಕಿಕೊಳ್ಳುವುದು ನಿಯಮ ಉಲ್ಲಂಘನೆ. ಇಷ್ಟು ದಿನ ಸುಮ್ಮನಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು ಈಗ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.