4 ಲಕ್ಷ ರೂ.ಗೆ ಬಾಲಕನ ಮಾರಾಟ | ನಾಲ್ವರ ಬಂಧನ

ಬೆಳಗಾವಿ : ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿದ ಘಟನೆ ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ನಡೆದಿದೆ.

ಸುಲ್ತಾನಪುರ ಮೂಲದ ಸದಾಶಿವ ಶಿವಬಸಪ್ಪ ಮಗದುಮ್ (ಮಗುವಿನ ಮಲತಂದೆ), ಭಡಗಾಂವ್​ ಮೂಲದ, ಸದ್ಯ ಸುಲ್ತಾನಪುರದಲ್ಲಿ ವಾಸವಿರುವ ಲಕ್ಷ್ಮಿ ಬಾಬು ಗೋಲಭಾವಿ, ಕೊಲ್ಲಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್, ಅಂಬೇಡ್ಕರ್ ನಗರದ ನಿವಾಸಿ ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಳಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ ಬಂಧಿತ ಆರೋಪಿಗಳು ಎನ್ನಲಾಗಿದೆ.

ಶಿವಬಸಪ್ಪ ಮಗದುಮ್, ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಸೇರಿ ಬಾಲಕನನ್ನು ಬೆಳಗಾವಿ ನಗರದ ದಿಲಶಾದ್ ಸಿಕಂದರ್ ತಹಸೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.































 
 

ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರಿಗೆ ಗಂಡು ಮಗು ಬೇಕೆಂಬ ಒಲವಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ಮಗದುಮ್ ವಿವಾಹವಾಗಿದ್ದರು. ಮಗದುಮ್ ಅವರಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇದರಿಂದ ಬೇಸರಗೊಂಡು  ಮಗದುಮ್ ಎನ್ನುವ ಮಲತಂದೆ ಬಾಲಕನನ್ನು ಮಾರಾಟ ಮಾಡಿದ್ದಾರೆ. ಸಂಗೀತಾ ಅವರನ್ನು ಮದುವೆಯಾಗಲು ಮಗದುಮ್​ಗೆ ಲಕ್ಷ್ಮಿ ಸಹಾಯ ಮಾಡಿದ್ದು,  ಬಳಿಕ ಸಂಚು ರೂಪಿಸಿ ಬಾಲಕನನ್ನು ಕಾರವಾರದ ಕೆಸ್ರೋಳಿಯಲ್ಲಿರುವ ಅನಸೂಯಾ ದೊಡ್ಮನಿ ಎಂಬುವರಿಗೆ ಒಪ್ಪಿಸುವಂತೆ ಕೇಳಿಕೊಂಡಿದ್ದಳು. ಬಳಿಕ ಅನಸೂಯಾ ಬಾಲಕನನ್ನು ಅನಾಥ ಎಂದು ಹೇಳಿ ದಿಲ್ಶಾದ್‌ಗೆ ಮಾರಾಟ ಮಾಡಿದ್ದಾಳೆ ಎಂಬ  ವರದಿ ಲಭಿಸಿದೆ.

ಏತನ್ಮಧ್ಯೆ, ಬಾಲಕನ ತಾಯಿ ಸಂಗೀತಾ ಕಮ್ಮಾರ್ ಮಗ ಕಾಣದಿದ್ದರಿಂದ, ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು. ದೂರಿನನ್ವಯ  ತನಿಖೆ ನಡೆಸಿದ ಪೊಲೀಸರು ಬೈಲಹೊಂಗಲ ಸಮೀಪದ ಗ್ರಾಮವೊಂದರಲ್ಲಿ ಬಾಲಕನನ್ನು ಪತ್ತೆ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top