ಹಿಂದು ಪಂಚಾಂಗ ಪ್ರಕಾರ ಜ.11ರಂದೇ ಅಯೋಧ್ಯೆಯಲ್ಲಿ ವಾರ್ಷಿಕೋತ್ಸವ ಆಚರಣೆ
ಅಯೋಧ್ಯೆ : ಅಯೋಧ್ಯೆಯಲ್ಲಿ ಹೊಸ ಮಂದಿರ ನಿರ್ಮಾಣವಾಗಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ತಿಯಾಯಿತು. 2024ರ ಪುಷ್ಯ ಮಾಸದ ಶುಕ್ಲ ಪಕ್ಷದ ಕೂರ್ಮ ದ್ವಾದಶಿ ದಿನದಂದು ಅಂದರೆ, 2024ರ ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯನ್ನು ಪೂರ್ಣಗೊಳಿಸಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ರಾಜ್ ಈ ಆಕರ್ಷಕ ಮೂರ್ತಿಯನ್ನು ಕೆತ್ತಿದ್ದಾರೆ.
2025ರಲ್ಲಿ ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವನ್ನು ಜನವರಿ 11ರಂದೇ ಆಚರಿಸಲಾಗಿದೆ. ವೈದಿಕ ಸನಾತನ ಸಂಸ್ಕೃತಿಯ ಕ್ಯಾಲೆಂಡರ್ ಪ್ರಕಾರ 2025ರಲ್ಲಿ ಪುಷ್ಯ ಮಾಸದ ಕೂರ್ಮ ದ್ವಾದಶಿಯು ಜನವರಿ 11ರಂದು ಬಂದಿದೆ. ಕೂರ್ಮ ದ್ವಾದಶಿಯ ಆಧಾರದ ಮೇಲೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವವನ್ನು ಆಚರಿಸಲಾಗಿದೆ. ಹಿಂದುಗಳ ಆಚರಣೆಗೆ ತಿಥಿ ನಕ್ಷತ್ರಗಳೇ ಮುಖ್ಯವಾಗಿರುವುದರಿಂದ 10 ದಿನ ಮೊದಲೇ ವಾರ್ಷಿಕ ಉತ್ಸವವನ್ನು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ.
ಜ.11ರಿಂದ ತೊಡಗಿ ಮೂರು ದಿನ ಮೂರು ದಿನ ಅಯೋಧ್ಯೆಯಲ್ಲಿ ಉತ್ಸವ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದಾರೆ. ಯೋಗಿ ಆದಿತ್ಯನಾಥ್ ರಾಮಲಲ್ಲಾನ ಮೂರ್ತಿಗೆ ಮಹಾಭಿಷೇಕ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಈ ಮೂರು ದಿನದ ಉತ್ಸವದಲ್ಲಿ ಸಂಗೀತ, ಕಲೆ ಮತ್ತು ಸಾಹಿತ್ಯ ವ್ಯಕ್ತಿಗಳ ಪ್ರದರ್ಶನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಇದ್ದವು. ಲಕ್ಷಾಂತರ ಜನರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಆವರಣವನ್ನು 50 ಕ್ವಿಂಟಾಲ್‌ಗೂ ಹೆಚ್ಚು ಹೂವುಗಳಿಂದ ಅಲಂಕರಿಸಲಾಗಿತ್ತು.