100ಕ್ಕೂ ಅಧಿಕ ಭವ್ಯ ಮಹಲುಗಳು, ಕಟ್ಟಡಗಳು ಕೇಂದ್ರದ ಪಾಲಾಗುವ ಸಾಧ್ಯತೆ
ಮುಂಬಯಿ : ಕೆಲದಿನಗಳ ಹಿಂದಷ್ಟೇ ಮನೆಯಲ್ಲಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಈಗ ಚೇತರಿಸುತ್ತಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಈಗ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಮನೆತನದ ಬರೋಬ್ಬರಿ 15,000 ಕೋ. ರೂ. ಮೌಲ್ಯದ ಆಸ್ತಿ ಈಗ ಕೇಂದ್ರ ಸರಕಾರದ ಪಾಲಾಗುವ ಭೀತಿ ತಲೆದೋರಿದೆ. ಸೈಫ್ ಅಲಿ ಖಾನ್ ತಂದೆ ಮಾಜಿ ಕ್ರಿಕೆಟಿಗ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಮಧ್ಯಪ್ರದೇಶದ ಭೋಪಾಳದ ಪಟೌಡಿ ನವಾಬ ಮನೆತನದವರಾಗಿದ್ದು, ಈ ರಾಜ ಮನೆತನಕ್ಕೆ ಮಧ್ಯಪ್ರದೇಶದಲ್ಲಿ ಭವ್ಯ ಮಹಲುಗಳು ಸೇರಿ ಅನೇಕ ಸೊತ್ತುಗಳಿವೆ. ಇವುಗಳ ಹಕ್ಕುಸ್ವಾಮ್ಯದ ಮೇಲಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು, ಈಗ ಈ ಎಲ್ಲ ಆಸ್ತಿ ಸರಕಾರದ ಖಜಾನೆ ಸೇರುವ ಸಾಧ್ಯತೆಯಿದೆ. ಆಸ್ತಿಯಲ್ಲಿ ಸೈಫ್‌ಗೂ ದೊಡ್ಡ ಪಾಲಿದೆ.
ತಡೆಯಾಜ್ಞೆ ತೆರವಾಗಿರುವುದರಿಂದ ಸರಕಾರ 1968ರ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಪಟೌಡಿ ಮನೆತನದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. 1947ರ ದೇಶ ವಿಭಜನೆ ಬಳಿಕ ಪಾಕಿಸ್ಥಾನಕ್ಕೆ ವಲಸೆ ಹೋದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರಕಾರಕ್ಕೆ ಈ ಕಾಯಿದೆ ಅವಕಾಶ ಮಾಡಿಕೊಡುತ್ತದೆ.
2015ರಲ್ಲಿ ಮುಂಬಯಿಯ ಶತ್ರು ಆಸ್ತಿ ವಾರಸುದಾರ ಕಚೇರಿ ಭೋಪಾಳದ ನವಾಬರ ಆಸ್ತಿಗಳನ್ನು ಸರಕಾರದ ಸೊತ್ತು ಎಂದು ಘೋಷಿಸಿದ್ದು, ಇದರ ವಿರುದ್ಧ ಪಟೌಡಿ ಪರಿವಾರ ಕೋರ್ಟ್ ಮೆಟ್ಟಿಲೇರುವುದರೊಂದಿಗೆ ಕಾನೂನು ಸಮರ ಶುರುವಾಗಿತ್ತು. ಹೈಕೋರ್ಟ್ ನವಾಬ ಪರಿವಾರಕ್ಕೆ ಅವರ ವಾದವನ್ನು ದಾಖಲೆ ಸಮೇತ ಮಂಡಿಸಲು ಸೂಚಿಸಿತ್ತು. ಆದರೆ ಇಷ್ಟರ ತನಕ ಪಟೌಡಿ ಪರಿವಾರ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಆಸ್ತಿ ವಶಪಡಿಸಿಕೊಳ್ಳಲು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದರೆ ಕ್ರಮ ಪ್ರಾರಂಭಿಸುವುದಾಗಿ ಭೋಪಾಳ ಜಿಲ್ಲಾಧಿಕಾರಿ ಹೇಳಿದ್ದಾರೆ.
ಭೋಪಾಳದಲ್ಲೇ ಪಟೌಡಿ ಪರಿವಾರದ ಬಹುತೇಕ ಆಸ್ತಿಗಳಿವೆ. ಇದಲ್ಲದೆ ಇತರ ಜಿಲ್ಲೆಗಳಲ್ಲೂ ಬಹಳಷ್ಟು ಆಸ್ತಿ ಇದ್ದು, 100ಕ್ಕೂ ಹೆಚ್ಚು ಭವ್ಯ ಮಹಲುಗಳು ಮತ್ತು ಕಟ್ಟಡಗಳಿವೆ. ಇದಲ್ಲದೆ ಎಕರೆಗಟ್ಟಲೆ ಭೂಮಿಯನ್ನು ಪಟೌಡಿ ಪರಿವಾರ ಹೊಂದಿತ್ತು. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 15,000 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. 1950ರಲ್ಲಿ ಪಟೌಡಿ ಪರಿವಾರದ ಪೂರ್ವಜರು ಪಾಕಿಸ್ಥಾನಕ್ಕೆ ವಲಸೆ ಹೋಗಿರುವ ಕಾರಣ ಅವರ ಆಸ್ತಿಗಳು ಸರಕಾರಕ್ಕೆ ಸೇರಬೇಕೆಂದು ಹೇಳಲಾಗುತ್ತಿದೆ.