ಪುತ್ತೂರು : ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬ್ಯಾಂಕ್ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿರುವ ಈಕೆ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ಅಂತಿಮ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಅವರು ಭೂ ಅಭಿವೃದ್ಧಿ ಬ್ಯಾಂಕ್‌ಗೆ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ ಎನ್ನಲಾಗಿದೆ.
ಕೃಷಿ ಪೂರಕ ವ್ಯವಸ್ಥೆಯ ಈ ಸಹಕಾರಿ ಬ್ಯಾಂಕಿನ ಮೆಟ್ಟಲು ಏರಿದ ಮೊದಲ ಕಾಲೇಜು ವಿದ್ಯಾರ್ಥಿನಿ ಸ್ವಾತಿ ರೈ ಆರ್ತಿಲ.
ಕಡಬ ತಾಲೂಕಿನ ಅರ್ತಿಲ ದಿ.ಆನಂದ ರೈ ಮತ್ತು ತಾರಾ ರೈ ಅವರ ಪುತ್ರಿಯಾದ ಸ್ವಾತಿ ರೈ ಅವರಿಗೆ ಈ ಅವಕಾಶ ಬಂದಿರುವುದು ಈ ಕುಟುಂಬಕ್ಕೆ ಅತ್ಯಂತ ಸಂತನ ತಂದಿದೆ. ತಾಯಿ ಮತ್ತು ಅಣ್ಣ ಯತೀಶ್ ರೈ ಜತೆ ವಾಸಿಸುತ್ತಿರುವ ಸ್ವಾತಿ ರೈ ಅವರಿಗೆ ಈ ಅವಕಾಶ ಅಚಾನಕ್ ಆಗಿ ಬಂದಿದೆ. ಈ ಅವಕಾಶ ಮೊದಲಿಗೆ ಇವರ ತಾಯಿ ತಾರಾ ರೈ ಅವರಿಗೆ ಬಂದಿತ್ತು. ಆದರೆ ಅವರು ತಮ್ಮದೇ ಆದ ಕಾರಣಗಳಿಂದ ಬೇಡ ಎಂದಿದ್ದರು. ಸ್ವಾತಿಯ ಅಣ್ಣ ದೊಡ್ಡಪ್ಪನ ಮಗ ಅಜಿತ್ ರೈ ಅವರು ನೀನೆ ಯಾಕೆ ಈ ಅವಕಾಶ ಬಳಕೆ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಇದರ ಜತೆಗೆ ಚಿಕ್ಕಪ್ಪ ಚೇತನ್ ರೈ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್, ಇವರೂ ಮಾನಸಿಕ ಧೈರ್ಯ ತುಂಬಿದರು. ಮೊದಲಿಗೆ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ ಕೊನೆಗೆ ಬಂದ ಅವಕಾಶ ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದರು.
ಕೃಷಿಕರ ಪರವಾಗಿರುವ ಸಹಕಾರಿ ಸಂಸ್ಥೆಯೊAದರ ನಿರ್ದೇಶಕಿ ಆಗಿ ಆಯ್ಕೆಯಾಗುವ ಮೂಲಕ ತನ್ನಿಂದಾದ ನೆರವನ್ನು ಕೃಷಿಕರಿಗೆ ಕೊಡಿಸಬಹುದಲ್ವಾ ಎಂಬ ಚಿಂತನೆ ಸ್ವಾತಿಗೆ ಹುಟ್ಟಿಕೊಂಡದ್ದು ಆಶೆಯ ಆಯ್ಕೆಗೆ ನಾಂದಿಯಾಯಿತು.
ಬಂದ ಅವಕಾಶ.
ಮೊದಲಿಗೆ ನನಗೆ ಇದೆಲ್ಲಾ ಬೇಡ ಅಂತ ಕಂಡಿತ್ತು. ಕಾಲೇಜು ಇರುವಾಗ ಸಮಸ್ಯೆಯಾಗುತ್ತದೆ ಎಂದು ಕೊಂಡೆ. ಆದರೆ ನಂತರ ಬಂದ ಅವಕಾಶ ಬಿಡುವುದು ಬೇಡ. ಇದೊಂದು ಸಂದರ್ಭ ನೋಡೋಣ. ತಿಂಗಳಿಗೆ ಒಮ್ಮೆ ಮೀಟಿಂಗ್ ಇರುತ್ತದೆ. ತೊಂದರೆ ಇಲ್ಲ ಎಂದು ಕೊಂಡು ಈ ಅವಕಾಶವನ್ನು ಬಳಿಸಿಕೊಂಡೆ. ಸಾಧ್ಯವಾದಷ್ಟು ರೈತರಿಗೆ ಸಹಾಯ ಮಾಡುವ ಅವಕಾಶ ಬಂದಿದೆ ಎಂದುಕೊಂಡು ಒಪ್ಪಿಗೆ ಕೊಟ್ಟೆ. ಈಗ ಆಯ್ಕೆಯಾಗಿದೆ. ತುಂಬಾ ಖುಷಿಯಾಗಿದೆ – ಸ್ವಾತಿ ರೈ ಆರ್ತಿಲ