ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ನಡಿ ಉಚಿತ ಚಿಕಿತ್ಸೆ
ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಉಚಿತವಾಗಿ ನೀಡಲು ಸರಕಾರ ನಿರ್ಧರಿಸಿದೆ. ಮೂಳೆ ಕ್ಯಾನ್ಸರ್, ಥಲಸ್ಸೆಮಿಯಾ, ಅಪ್ಲಾಸ್ಟಿಕ್ ರಕ್ತಹೀನತೆ ಮತ್ತು ಇತರ ಎಂಟೋಲಾಜಿಕಲ್ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೂಳೆ ಅಸ್ಥಿಮಜ್ಜೆ (bone marrow transplant (BMT) ಕಸಿ ಅಗತ್ಯವಿದೆ. ಪ್ರಸ್ತುತ ಈ ಚಿಕಿತ್ಸೆ ಬಹಳ ದುಬಾರಿಯಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 20-40 ಲಕ್ಷ ರೂ. ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಮಾರು 10-12 ಲಕ್ಷ ವೆಚ್ಚವಾಗುತ್ತದೆ ಎಂದು ಬಿಜೆಪಿ ಸಂಸದ ಡಾ. ಮಂಜುನಾಥ್ ತಿಳಿಸಿದ್ದಾರೆ.
ಈಗ ಅಸ್ಥಿಮಜ್ಜೆ ಕಸಿಯನ್ನು ಕೋಡ್ ಮಾಡಲಾದ ಕಾರ್ಯವಿಧಾನವಾಗಿ ಸೇರಿಸಲಾಗಿರುವುದರಿಂದ, ಈ ಚಿಕಿತ್ಸೆಯನ್ನು ಆಯುಷ್ಮಾನ್ಗೆ ಸೇರಿದ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಬಿಪಿಎಲ್ ವರ್ಗದ ರೋಗಿಗಳಿಗೆ ಇದು ದೊಡ್ಡ ವರದಾನವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬಿಜೆಪಿ ಸಂಸದ ಮಂಜುನಾಥ ಅವರು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಿ ಎನ್ನುವ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ. ಬಡವರಿಗೂ ಕೂಡ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿವೆ. ಕಿಡ್ನಿ ಕಸಿಗೆ 5000 ಮಂದಿ ಸಾಲಿನಲ್ಲಿದ್ದಾರೆ. ಕಿಡ್ನಿ ದಾನಿಗಳು ಸಿಕ್ಕರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.