ಪಿಎಫ್ಐ ಸೀಕ್ರೆಟ್ ಸರ್ವಿಸ್ ಟೀಮ್ ಸದಸ್ಯ
ಬೆಂಗಳೂರು : ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ನಿಷೇಧಿತ ಪಿಎಫ್ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಎಂಬಾತನನ್ನು ಎನ್‌ಐಎ ನಿನ್ನೆ ಬಂಧಿಸಿದೆ. ಪ್ರವೀಣ್ ನೆಟ್ಟಾರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 21ನೇ ಆರೋಪಿ ಅತೀಕ್. ಈತ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯನಾಗಿದ್ದ ಅತೀಕ್ ಕೊಲೆ ಬಳಿಕ ಆರೋಪಿ ಮುಸ್ತಫಾನಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಮುಸ್ತಫಾನನ್ನು ಚೆನ್ನೈಗೆ ಕಳುಹಿಸಿ ಪರಾರಿಯಾಗಲು ನೆರವು ನೀಡಿದ್ದ. ಈ ಪ್ರಕರಣದಲ್ಲಿ ಈತನೂ ಪ್ರಮುಖ ಪಾತ್ರಧಾರಿಯಾಗಿದ್ದ ಎಂದು ಎನ್‌ಐಎ ತಿಳಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ 6 ಆರೋಪಿಗಳು ತಲೆಮರೆಸಿಕೊಂಡಿದ್ದು, ಆ ಆರೋಪಿಗಳ ಪತ್ತೆಗಾಗಿ ಎನ್ಐಎ ತಂಡದಿಂದ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಮಾಹಿತಿ ನೀಡಿದರೆ ಬಹುಮಾನ ಘೋಷಣೆ ಮಾಡುವುದಾಗಿ ತಿಳಿಸಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಮಾಡಿದ್ದ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದ ಅತೀಕ್ ಆತನಿಗೆ ಪರಾರಿಯಾಗಲು ಕೂಡ ಸಹಾಯ ಮಾಡಿದ್ದ. ಜನರಲ್ಲಿ ಭಯ ಉಂಟುಮಾಡಲು ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್‌ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಕೊಲೆಯ ಪ್ಲಾನ್ ಮಾಡಿದ್ದ ಮುಸ್ತಫಾ ಪೈಚಾರ್ನನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ ವೇಳೆ ಎನ್ಐಎಗೆ ಮತ್ತಷ್ಟು ಸ್ಪೋಟಕ ಮಾಹಿತಿ ಪತ್ತೆಯಾಗಿದೆ. ಪ್ರವೀಣ್ ನೆಟ್ಟಾರುಗಳಂಥ ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದ ಪಿಎಫ್ಐ ಅಂತವರ ಗುರಿಯಿಟ್ಟು ಹತ್ಯೆ ಮಾಡಲೆಂದೇ ಸೀಕ್ರೆಟ್ ತಂಡಗಳ ರಚನೆ ಮಾಡಿತ್ತು ಎನ್ನಲಾಗಿದೆ. ಪಿಎಫ್ಐನಿಂದ ರಚನೆಯಾಗಿದ್ದ ಈ ಸೀಕ್ರೆಟ್ ತಂಡಗಳನ್ನು ಪಿಎಫ್ಐ ಸರ್ವಿಸ್ ಟೀಮ್ಸ್ ಎಂದು ಕರೆಯಲಾಗುತ್ತಿತ್ತು. ಈ ತಂಡಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿತ್ತು. ಈ ತಂಡಗಳಿಗೆ ಶಸ್ತ್ರಾಸ್ತ್ರ ಹಾಗೂ ಕಣ್ಗಾವಲು ತರಬೇತಿ ಸಹ ನೀಡಲಾಗಿತ್ತು. 2022ರ ಜುಲೈ 26ರಂದು ಸುಳ್ಯದ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ 23 ಆರೋಪಿಗಳ ವಿರುದ್ಧ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಾಪತ್ತೆಯಾಗಿರುವ 6 ಆರೋಪಿಗಳಿಗಾಗಿ ಎನ್ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.