ಎರಡೂ ದರೋಡೆ ಕೃತ್ಯಗಳಲ್ಲಿವೆ ಕೆಲವು ಸಾಮ್ಯತೆ
ಮಂಗಳೂರು: ಕೆ.ಸಿ ರೋಡ್‌ನ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಕೃತ್ಯವನ್ನು ನಾಲ್ಕೇ ದಿನಗಳಲ್ಲಿ ಭೇದಿಸಲು ಪೊಲೀಸರಿಂದ ಸಾಧ್ಯವಾಗಿದೆ. ಆದರೆ ವಿಟ್ಲ ಸಮೀಪ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿಯವರ ಮನೆಯಲ್ಲಿ ಇದೇ ರೀತಿ ನಡೆದ ದರೋಡೆ ಪ್ರಕರಣವನ್ನು ಯಾಕೆ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜನಸಾಮಾನ್ಯರ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಪ್ರಶ್ನೆ.
ಜ.3ರಂದು ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿಯ ಮನೆಗೆ ಬಂದಿದ್ದ ಏಳು ದರೋಡೆಕೋರರ ತಂಡ ಮನೆಯಲ್ಲಿ ಸುಮಾರು ಎರಡೂವರೆ ತಾಸು ಶೋಧನೆಯ ನಾಟಕವಾಡಿ ಐದು ಮೂಟೆ ತುಂಬ ನದು ಹಣ ದೋಚಿಕೊಂಡು ಪರಾರಿಯಾಗಿದೆ. ಇದು ಕೂಡ ಬಹಳ ವ್ಯವಸ್ಥಿತವಾಗಿ ಪ್ಲಾನ್ ಮಾಡಿದ ದರೋಡೆ. ಕೃತ್ಯ ನಡೆದು ಇಂದಿಗೆ 18 ದಿನವಾಗಿದ್ದರೂ ಪೊಲೀಸರಿಗೆ ಈ ದರೋಡೆ ಬಗ್ಗೆ ಯಾವ ಸುಳಿವು ಕೂಡ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ವಿಶೇಷವೆಂದರೆ ಈ ದರೋಡೆ ಕೂಡ ಶುಕ್ರವಾರವೇ ನಡೆದಿದೆ. ದರೋಡೆಕೋರರು ಬಳಸಿದ ಕಾರಿನ ನಕಲಿ ನೋಂದಣಿ ನಂಬರ್ ಕೂಡ ತಮಿಳುನಾಡಿನದ್ದೇ ಆಗಿತ್ತು. ಎರಡೂ ದರೋಡೆ ಕೃತ್ಯದಲ್ಲಿ ಕೆಲವು ಸಾಮ್ಯತೆಗಳಿವೆ. ಹೀಗಾಗಿ ಒಂದೇ ಗ್ಯಾಂಗ್ ಎರಡೂ ಕೃತ್ಯಗಳಲ್ಲಿ ಶಾಮೀಲಾಗಿದೆಯೇ ಎಂಬ ಅನುಮಾನ ಇದೆ. ಪೊಲೀಸರು ತನಿಖೆಗೆ ಸಂಬಂಧಪಟ್ಟಂತೆ ಯಾವ ಮಾಹಿತಿಯನ್ನೂ ಬಹಿರಂಗಪಡಿಸುತ್ತಿಲ್ಲ. ಮಾಧ್ಯಮದವರು ಕೇಳಿದರೆ ತನಿಖೆ ನಡೆಯುತ್ತಿದೆ, ಸುಳಿವು ಸಿಕ್ಕಿಲ್ಲ ಎಂಬ ಉತ್ತರವಷ್ಟೇ ಬರುತ್ತಿದೆ.
ಉದ್ಯಮಿ ಮನೆಯಿಂದ 30 ಲ.ರೂ. ನಗದು ಮಾತ್ರ ದರೋಡೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಐದು ಗೋಣಿಚೀಲಗಳ ತುಂಬ ನಗದು ಒಯ್ದಿದ್ದಾರೆ ಎಂಬ ಮಾಹಿತಿಯಿರುವ ಕಾರಣ ದೋಚಿದ ನಗದು ಮೊತ್ತ ಹಲವು ಪಟ್ಟು ಹೆಚ್ಚು ಇದೆ ಎಂಬ ಅನುಮಾನ ಆರಂಭದಿಂದಲೂ ಸಾರ್ವಜನಿಕ ವಲಯದಲ್ಲಿದೆ. ಎಲ್ಲ ವಿಚಾರ ಗೊತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಗುಮಾನಿ ಇದ್ದರೂ ಈ ನಿಟ್ಟಿನಲ್ಲಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ.